ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆಯಲುಬೀಚ್‌ಗಳತ್ತ ಲಗ್ಗೆ ಇಟ್ಟ ಪ್ರವಾಸಿಗರು.. 
ನ್ಯೂಸ್

ಜನಜಂಗುಳಿಯಿಂದ ಸ್ತಬ್ಧವಾದ ಕರಾವಳಿ

ಪ್ರಮುಖ ಮುಖ್ಯಾಂಶಗಳು

  • ಕರಾವಳಿಯಾದ್ಯಂತ ಜನಜಾತ್ರೆ
  • ವಾರಾಂತ್ಯದ ರಜೆ, ಮದುವೆಗಳ ಅಬ್ಬರ
  • ನಗರಗಲ್ಲಿ ಸಂಚಾರ ದಟ್ಟಣೆ
  • ವಾಹನ ದಟ್ಟಣೆ ನಿಯಂತ್ರಿಸಲು ಸಂಚಾರ ಪೊಲೀಸರು ಹರಸಾಹಸ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾನುವಾರ ಶುಭಕಾರ್ಯಗಳ ಅಬ್ಬರ ಹಾಗೂ ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಯಿತು. ಪ್ರವಾಸಿ ತಾಣಗಳು ಮತ್ತು ನಗರದ ಪ್ರಮುಖ ರಸ್ತೆಗಳು ಜನ ಹಾಗೂ ವಾಹನಗಳಿಂದ ಕಿಕ್ಕಿರಿದು ತುಂಬಿ ಹೋಗಿದ್ದವು.
ನಗರದ ಆಯಕಟ್ಟಿನ ಸ್ಥಳಗಳಾದ ಜ್ಯೋತಿ ವೃತ್ತ, ಸ್ಟೇಟ್‌ಬ್ಯಾಂಕ್, ನಂತೂರು ಮತ್ತು ಪಂಪ್‌ವೆಲ್ ಜಂಕ್ಷನ್‌ಗಳಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಸಾಲು ಸಾಲು ಮದುವೆ ಸಮಾರಂಭಗಳಿದ್ದ ಕಾರಣ ರಾಷ್ಟ್ರೀಯ ಹೆದ್ದಾರಿ 66 ಮತ್ತು 75ರಲ್ಲಿ ಕಿಲೋ ಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮುಂಜಾನೆಯಿಂದಲೇ ವಾಹನ ದಟ್ಟಣೆ ನಿಯಂತ್ರಿಸಲು ಸಂಚಾರ ಪೊಲೀಸರು ಹರಸಾಹಸ ಪಡಬೇಕಾಯಿತು.
ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆಯಲು ಪ್ರವಾಸಿಗರು ಬೀಚ್‌ಗಳತ್ತ ಲಗ್ಗೆ ಇಟ್ಟಿದ್ದರು. ಪಣಂಬೂರು ಬೀಚ್‌ನಲ್ಲಿ ಸಾವಿರಾರು ಪ್ರವಾಸಿಗರು ಆಗಮಿಸಿದ್ದರಿಂದ ಪಾರ್ಕಿಂಗ್ ಸ್ಥಳಾವಕಾಶದ ಕೊರತೆ ಕಂಡುಬಂತು. ತಣ್ಣೀರುಬಾವಿ ಮತ್ತು ಉಳ್ಳಾಲ ಬೀಚ್‌ನಲ್ಲೂ ಸಂಜೆ ವೇಳೆ ಜನಸಾಗರವೇ ನೆರೆದಿತ್ತು. ಸೋಮೇಶ್ವರ ಬೀಚ್‌ನ ಕಲ್ಲಿನ ಬೆಟ್ಟದ ಮೇಲೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಯುವಜನತೆ ಮುಗಿಬಿದ್ದಿದ್ದರು.

ಧಾರ್ಮಿಕ ಕೇಂದ್ರಗಳಲ್ಲಿ ರಶ್

ನಗರದ ಕದ್ರಿ ಪಾರ್ಕ್ ಮತ್ತು ಗಾಂಧಿ ಪಾರ್ಕ್‌ಗಳಲ್ಲಿ ಪಾಲಕರು ಮಕ್ಕಳೊಂದಿಗೆ ಕಾಲ ಕಳೆದರೆ, ಪಿಲಿಕುಳ ನಿಸರ್ಗಧಾಮಕ್ಕೆ ಹೊರಜಿಲ್ಲೆಗಳಿಂದ ನೂರಾರು ಬಸ್‌ಗಳು ಮತ್ತು ಖಾಸಗಿ ವಾಹನಗಳು ಆಗಮಿಸಿದ್ದವು. ಧಾರ್ಮಿಕ ಕ್ಷೇತ್ರಗಳಾದ ಸುಬ್ರಹ್ಮಣ್ಯ, ಧರ್ಮಸ್ಥಳ, ಕದ್ರಿ ಮಂಜುನಾಥ ದೇವಸ್ಥಾನ, ಮಂಗಳಾದೇವಿ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಮದುವೆಗಳಿದ್ದ ಕಾರಣ ಭಕ್ತರ ಸಂಖ್ಯೆ ಗಣನೀಯ ಏರಿಕೆಯಾಗಿತ್ತು.