ಕೇವಲ 20 ನಿಮಿಷಗಳ ಕಾಲ ಅಬ್ಬರಿಸಿದ ಗುಡುಗು ಸಹಿತ ಮಳೆಗೆ ಮಂಗಳೂರು ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದು, ನಗರದ ಮೂಲಸೌಕರ್ಯದ ಅಸಲಿಯತ್ತು ಬಯಲಾಗಿದೆ.  
ನ್ಯೂಸ್

ದಿಢೀರ್ ಗುಡುಗು ಸಹಿತ ಮಳೆಗೆ ಮಂಗಳೂರು ಹೈರಾಣು

ಮಂಗಳೂರು: ಮಂಗಳೂರು ಸುತ್ತಮುತ್ತ ಮಧ್ಯಾಹ್ನದ ವೇಳೆಗೆ ಸುಡುವ ಬಿಸಿಲು ಹಾಗೂ ಅತಿಯಾದ ಸೆಖೆ ಜನರನ್ನು ಹೈರಾಣಾಗಿದ್ದು, ಸಂಜೆ ದಿಢೀರ್ ಗುಡುಗು ಸಹಿತ ಮಳೆಯಾಗಿದೆ.
ಕರಾವಳಿಯ ಜನತೆ ಕಳೆದ ಕೆಲವು ದಿನಗಳಿಂದ ಸುಡುತ್ತಿರುವ ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದರು. ಆದರೆ ಗುರುವಾರ ಸಂಜೆ ಸುರಿದ ದಿಢೀರ್ ಮಳೆ ತಂಪು ನೀಡುವ ಬದಲು ಆತಂಕವನ್ನು ಹೊತ್ತು ತಂದಿದೆ. ಕೇವಲ 20 ನಿಮಿಷಗಳ ಕಾಲ ಅಬ್ಬರಿಸಿದ ಗುಡುಗು ಸಹಿತ ಮಳೆಗೆ ಮಂಗಳೂರು ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದು, ನಗರದ ಮೂಲಸೌಕರ್ಯದ ಅಸಲಿಯತ್ತು ಬಯಲಾಗಿದೆ.
*ಪ್ರವಾಹದಂತಾದ ಹೆದ್ದಾರಿಗಳು
ನಗರದ ಪ್ರಮುಖ ಆಯಕಟ್ಟಿನ ಸ್ಥಳಗಳಾದ ಪಂಪ್‌ವೆಲ್, ಕೂಳೂರು, ಕೊಟ್ಟಾರ ಚೌಕಿ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ರಸ್ತೆಯಲ್ಲೇ ಸುಮಾರು ಎರಡರಿಂದ ಮೂರು ಅಡಿಗಳಷ್ಟು ನೀರು ನಿಂತಿತ್ತು. ಪಂಪ್‌ವೆಲ್ ಫ್ಲೈ ಓವರ್ ಅಡಿಯಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕೃತಕ ಪ್ರವಾಹ ಭಯ ಆವರಿಸಿದ್ದು, ದ್ವಿಚಕ್ರ ವಾಹನಗಳು ಭಯದಲ್ಲೇ ಸಂಚರಿಸುವ ದೃಶ್ಯಗಳು ಕಂಡುಬಂದವು. ಕೂಳೂರು ಹೆದ್ದಾರಿಯಲ್ಲಿ ನೀರು ನಿಂತಿದ್ದರಿಂದ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತು, ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
*ಮಳೆಗಾಲಕ್ಕೆ ಸಿದ್ಧಗೊಳ್ಳದ ಮಹಾನಗರ
ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶಿಸುವ ಮುನ್ಸೂಚನೆ ಇದ್ದರೂ, ಮಂಗಳೂರು ಮಹಾನಗರ ಪಾಲಿಕೆಯು ಮಳೆಗಾಲದ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬುದು ಈ ಮಳೆಯಿಂದ ಸಾಬೀತಾಗಿದೆ. ನಗರದ ಅನೇಕ ಕಡೆಗಳಲ್ಲಿ ರಾಜಕಾಲುವೆಗಳ ಹೂಳೆತ್ತುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಚರಂಡಿಗಳು ಕಸಕಡ್ಡಿಗಳಿಂದ ತುಂಬಿ ಹೋಗಿರುವುದರಿಂದ ಮಳೆನೀರು ರಸ್ತೆಗೆ ನುಗ್ಗುತ್ತಿದೆ. ಕೇವಲ 20 ನಿಮಿಷಗಳ ಮಳೆಯನ್ನೇ ತಡೆದುಕೊಳ್ಳಲಾಗದ ನಗರದ ಸ್ಥಿತಿ ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ

ಸ್ಮಾರ್ಟ್ ಸಿಟಿ ಎಂದು ಕರೆಸಿಕೊಳ್ಳುವ ಮಂಗಳೂರಿನಲ್ಲಿ ಸಣ್ಣ ಮಳೆ ಬಂದರೂ ಸಂಚಾರ ಬಂದ್ ಆಗುವ ಪರಿಸ್ಥಿತಿ ಇರುವುದು ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿ. ಪ್ರತಿ ವರ್ಷ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಚರಂಡಿ ದುರಸ್ತಿ ಮಾಡಲಾಗುತ್ತಿದ್ದರೂ, ಮಳೆಗಾಲ ಬಂದಾಗ ಪರಿಸ್ಥಿತಿ ಮಾತ್ರ ಬದಲಾಗುತ್ತಿಲ್ಲ. ಗುರುವಾರ ಸಂಜೆ ಸುರಿದ ಸಿಡಿಲು ಸಹಿತ ಮಳೆ ವ್ಯಾಪಾರಸ್ಥರಿಗೂ ಭಾರೀ ನಷ್ಟ ಉಂಟುಮಾಡಿದೆ.

ತಗ್ಗು ಪ್ರದೇಶದಲ್ಲಿ ಮಳೆ ನೀರು

ಮಂಗಳೂರು ನಗರ ಭಾಗದಲ್ಲಿ ಸಂಜೆ ಗುಡುಗು ಸಿಡಿಲಿನ ಮಳೆಯಿಂದಾಗಿ ಕೆಲವು ತಗ್ಗು ಪ್ರದೇಶದಲ್ಲಿ ಮಳೆ ನೀರು ನಿಂತು ಸಾಕಷ್ಟು ಸಮಸ್ಯೆಯನ್ನು ಸೃಷ್ಟಿ ಮಾಡಿತ್ತು. ಮಂಗಳೂರಿನ ಕೇಂದ್ರ ಭಾಗ ಲಾಲ್‌ಭಾಗ್ ಹಾಗೂ ಬಿಜೈ, ಕೆಎಸ್‌ಆರ್‌ಟಿಸಿ ಸುತ್ತಮುತ್ತ ಮಳೆಯಿಂದ ರಸ್ತೆಯೇ ತೋಡಿನಂತಾಗಿತ್ತು. ಪಡೀಲ್, ಬಜಾಲ್, ಪಂಪ್‌ವೆಲ್ ಭಾಗದಲ್ಲಿ ಮಳೆ ನೀರು ಸರಾಗ್ವಾಗಿ ಹರಿಯಲು ಅಡ್ಡಿಯಾದರೆ ಉಳಿದಂತೆ ನಗರದ ಪ್ರಮುಖ ರಸ್ತೆಯಲ್ಲಿ ಮಳೆ ನೀರು ಹರಿಯುವ ದೃಶ್ಯಗಳು ಸಾಮಾನ್ಯವಾಗಿತ್ತು. ಅಲ್ಲಲ್ಲಿ ರಸ್ತೆ ಅಗೆಯುವ ಕಾಮಗಾರಿಗಳು ಸಾಗುತ್ತಿರುವ ಪರಿಣಾಮ ಮಳೆ ನೀರು ಚರಂಡಿಯಲ್ಲಿ ಸರಾಗವಾಗಿ ಅರಿಯಲು ಸಾಧ್ಯವಾಗದೇ ರಸ್ತೆ, ತಗ್ಗು ಪ್ರದೇಶದೊಳಗೆ ನುಗ್ಗಿ ಬರುವ ದೃಶ್ಯಗಳು ಸಾಮಾನ್ಯವಾಗಿತ್ತು. ಮಳೆಯಿಂದಾಗಿ ಸಂಜೆ ಹೊತ್ತು ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿಯಾಗಿ ಸಂಚಾರಕ್ಕೂ ಸಮಸ್ಯೆ ಕಾಡಿತ್ತು.