ನ್ಯೂಸ್

ನನ್ನ ತಂದೆ ಸೋಲಿಸಲು ಮೂವರು ನಿಂತಿದ್ದಾರೆ: ಶಾಸಕ ಸುರೇಶ್ ಗೌಡ ಪರ ಚುನಾವಣಾ ಅಖಾಡಕ್ಕಿಳಿದ ಮಗಳು

ಮಂಡ್ಯ: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗುವ ಮುನ್ನವೇ ಸಕ್ಕರೆ ನಾಡು ಮಂಡ್ಯದಲ್ಲಿ ಚುನಾವಣಾ ಕಾವು ರಂಗೇರಿದೆ. ಈ ಬಾರಿ ನಾಗಮಂಗಲ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಜೆಡಿಎಸ್​ನಿಂದ ಉಚ್ಛಾಟನೆಗೊಂಡಿರುವ ಶಿವರಾಮೇಗೌಡ, ಜೆಡಿಎಸ್​ ಬಿಟ್ಟು ಕಾಂಗ್ರೆಸ್​ ಸೇರಿದ ಎನ್​. ಚಲುವರಾಯಸ್ವಾಮಿ ಹಾಗೂ ಹಾಲಿ ಜೆಡಿಎಸ್​ ಶಾಸಕ ಸುರೇಶ್​ ಗೌಡ ನಡುವೆ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇರುವುದರಿಂದ ಕಣದಲ್ಲಿ ಭರ್ಜರಿ ಪ್ರಚಾರ ಈಗಾಗಲೇ ಆರಂಭವಾಗಿದೆ.

ಇದೀಗ ಶಾಸಕ ಸುರೇಶ್ ಗೌಡ ಪರವಾಗಿ ಮಗಳು ಧನ್ಯತಾ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ನಾಗಮಂಗಲ ಕ್ಷೇತ್ರದ ಹಳ್ಳಿಗಳಲ್ಲಿ ನಿತ್ಯದ ಪ್ರಚಾರದಲ್ಲಿ ತೊಡಗಿಕೊಂಡಿರುವ ಧನ್ಯತಾ, ನಾನು ಮೊದಲ ಬಾರಿಗೆ ತಂದೆಯ ಪರ ಪ್ರಚಾರಕ್ಕೆ ಬಂದಿದ್ದೇನೆ. ಈ ಬಾರಿ ನಮ್ಮ ತಂದೆ ಸೋಲಿಸಲು ಮೂವರು ನಿಂತಿದ್ದಾರೆ. ಹೇಗಾದರೂ ಮಾಡಿ‌ ನಮ್ಮ ತಂದೆ ಸೋಲಿಸಬೇಕು ಅಂದುಕೊಂಡಿದ್ದಾರೆ. ಈ ಬಾರಿ ನಿಮ್ಮ ಮನೆಯಿಂದ ಬರುವ ಒಂದೊಂದು ಮತವೂ ಮುಖ್ಯ. ದಯವಿಟ್ಟು ಎಲ್ಲ ಸಹಕಾರ ಮಾಡಿ, ಈ ಬಾರಿಯೂ ನಮ್ಮ‌ ತಂದೆಯನ್ನು ಗೆಲ್ಲಿಸಿ ಎಂದು ಕೇಳಿಕೊಂಡಿದ್ದಾರೆ.

ಕುಮಾರಸ್ವಾಮಿ ಅವರ ಪಂಚರತ್ನ ಯಾತ್ರೆಯ ಬಗ್ಗೆ ಎಲ್ಲರಿಗೂ ತಿಳಿಸಿ. ನಮ್ಮ ತಂದೆ ಸತತ ಎರಡು ಬಾರಿ ಎಂಎಲ್‌ಎ ಆಗಿಲ್ಲ. ಈ‌ ಬಾರಿ ದಯವಿಟ್ಟು ಅವಕಾಶ ಮಾಡಿಕೊಡಿ. ನಮ್ಮ ತಂದೆ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಹೀಗಾಗಿ ನಮ್ಮ ತಂದೆಗೆ ದಯವಿಟ್ಟು ಸಹಕಾರ ಮಾಡಿ ಎಂದು ಧನ್ಯತಾ ಮನವಿ ಮಾಡಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)