ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.
ನಟನೆ ಮಾತ್ರವಲ್ಲ, ನೇಪಥ್ಯದಲ್ಲೂ ಇದೆ ಬದುಕು!
ರಂಗಭೂಮಿಗೆ ಬರುವವರು ಹೆಚ್ಚಾಗಿ ನಟನೆಯ ಆಸಕ್ತಿಯಿಂದ ಬರುತ್ತಾರೆ. ನಾಟಕಗಳಲ್ಲಿ ನಟನೆಯಲ್ಲದೆ ಸಂಗೀತ, ಕಲಾ ನಿರ್ದೇಶನ, ಕಾಸ್ಟೂಮ್ ವಿಭಾಗ, ಬೆಳಕು ... ಹೀಗೆ ಹಲವು ವಿಭಾಗಗಳಿದ್ದು, ನಟನೆಯ ಜೊತೆಗೆ ಅದನ್ನೂ ಕಲಿತರೆ ಆಗ ಅನುಕೂಲವಾಗುತ್ತದೆ. ಏಕೆಂದರೆ, ರಂಗಭೂಮಿಯಲ್ಲಿ ತಂತ್ರಜ್ಞರ ಸಂಖ್ಯೆ ಕಡಿಮೆಯಾಗುತ್ತಿದ್ದು, ಹಾಗೆ ಹಲವು ವಿಷಯಗಳನ್ನು ಕಲಿತುಕೊಳ್ಳುವ ಮೂಲಕ ಬೇರೆಬೇರೆ ವಿಭಾಗಗಳಲ್ಲಿ ತೊಡಗಿಸಿಕೊಳ್ಳಬಹುದು. ಬರೀ ರಂಗಭೂಮಿಯಷ್ಟೇ ಅಲ್ಲ, ಕಿರುತೆರೆ, ಹಿರಿತೆರೆಗಳಲ್ಲೂ ಸಾಧನೆ ಮಾಡಬಹುದು. ನಾಟಕಗಳಲ್ಲಿ ಕಲಿತು, ಬೇರೆ ಮಾಧ್ಯಮಗಳಲ್ಲಿ ತೊಡಗಿಸಿಕೊಂಡು, ಹೆಸರು ಮಾಡಿರುವ ಸಾಕಷ್ಟು ಜನ ಇದ್ದಾರೆ. ಹಾಗಾಗಿ ಯಾವುದೋ ಒಂದು ವಿಷಯದಲ್ಲಿ ತೊಡಗಿಸಿಕೊಳ್ಳದೇ, ಬೇರೆ ವಿಭಾಗಗಳಲ್ಲೂ ತೊಡಗಿಸಿಕೊಂಡರೆ, ಖಂಡಿತ ಅನುಕೂಲವಾಗುತ್ತದೆ. ಇಂದು ಜನರ ಮನರಂಜನೆಗೆ ಬೇರೆಬೇರೆ ಮಾಧ್ಯಮಗಳಿವೆ. ಇತ್ತೀಚಿನ ವರ್ಷಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ವೃತ್ತಿರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿ ಎರಡಕ್ಕೂ ಪೆಟ್ಟು ಬಿದ್ದಿದೆ. ಇಲ್ಲಿ ಹೆಸರು ಮಾಡಿರುವ ದೊಡ್ಡ ಸಂಸ್ಥೆಗಳೇ ಕಷ್ಟ ಅನುಭವಿಸುತ್ತಿರುವಾಗ, ಸಣ್ಣ ಸಂಸ್ಥೆಗಳ ಕಷ್ಟ ಹೇಳತೀರದು. ಹಾಗಾಗಿ, ರಂಗಭೂಮಿಯಲ್ಲಿ ನಟನೆಯನ್ನೇ ನಂಬಿಕೊಂಡು ಏನೋ ಮಾಡುತ್ತೀನಿ ಎನ್ನುವುದು ಕಷ್ಟ. ನೇಪಥ್ಯದ ಇತರ ಮಾರ್ಗಗಳತ್ತ ಗಮನ ಹರಿಸಿದರೆ ಬಹಳಷ್ಟು ಅನುಕೂಲಗಳಿವೆ
| ಮಂಡ್ಯ ರಮೇಶ್ ನಟ, ನಿರ್ದೇಶಕ, ನಟನ ಸಂಸ್ಥೆ ಸ್ಥಾಪಕ