ಮಂಡ್ಯ: ಜಿಲ್ಲೆಯ ನಾಗಮಂಗಲದಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಎಲ್ಲಾ ಆರೋಪಿಗಳಿಗೆ ಮಂಡ್ಯದ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ನ್ಯಾಯಾಂಗ ಬಂಧನದಲ್ಲಿದ್ದ ಎರಡೂ ಕೋಮಿನ ಒಟ್ಟು 55 ಆರೋಪಿಗಳಿಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ತಲಾ 1 ಲಕ್ಷ ರೂ. ಮೌಲ್ಯದ ಬಾಂಡ್, ಪ್ರತೀ ಭಾನುವಾರ ಠಾಣೆಗೆ ತೆರಳಿ ಸಹಿ ಹಾಕಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು, ಅಪರಾಧಿ ಕೃತ್ಯದಲ್ಲಿ ಭಾಗಿಯಾಗದಂತೆ ನ್ಯಾಯಾಲಯದ ಆರೋಪಿಗಳಿಗೆ ಷರತ್ತು ವಿಧಿಸಿದೆ.
ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣ ಸೋಮವಾರ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ 11ರಂದು ಆರೋಪಿಗಳ ಬಂಧನವಾಗಿತ್ತು. ಸೆ.12ರಿಂದ ಆರೋಪಿಗಳು ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ಪಟ್ಟಣದಲ್ಲಿ ಗಣಪತಿ ಮೆರವಣಿಗೆ ವೇಳೆ ಹಿಂದೂ - ಮುಸ್ಲಿಂ ಗಲಾಟೆ ನಡೆದು, ಪೊಲೀಸರು ಲಾಠಿ ಪ್ರಹಾರ ಮಾಡಿದ್ದರು, ಇಡೀ ಪಟ್ಟಣ ಪ್ರಕ್ಷುಬ್ಧ ವಾಗಿತ್ತು. ಪಟ್ಟಣದ ಬದರಿಕೊಪ್ಪಲಿನ ಗಣಪತಿ ಉತ್ಸವ ಮೆರವಣಿಗೆಯಲ್ಲಿ ಮೈಸೂರು ರಸ್ತೆಗೆ ಆಗಮಿಸುತ್ತಿದಂತೆ. ಕಿಡಿಗೇಡಿಗಳು ಗಣಪತಿ ಉತ್ಸವದ ಮೆರವಣಿಗೆ ಯಲ್ಲಿದ್ದ ಹುಡುಗರ ಮೇಲೆ ಕಲ್ಲು ತೂರಿದ್ದರು. ಇದು ಘಟನೆಗೆ ಕಾರಣವಾಗಿದ್ದು, ಈ ವೇಳೆ ಎರಡು ಗುಂಪುಗಳ ನಡುವೆ ಜಗಳ ತಾರಕ್ಕೇರಿತ್ತು. ಈ ವೇಳೆ ಎರಡು ಗುಂಪುಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 150 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. 30 ಮುಸ್ಲಿಂ ಯುವಕರು ಮತ್ತು 23 ಹಿಂದೂ ಯುವಕರನ್ನು ಬಂಧಿಸಲಾಗಿತ್ತು.