ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿ ಮೆರವಣಿಗೆ ಜಿಲ್ಲಾವಾರು ಭಾಗವಹಿಸಿದ್ದ ಸ್ತಬ್ಧ ಚಿತ್ರಗಳ ಪೈಕಿ ಮಂಡ್ಯ ಜಿಲ್ಲೆಯ ಸ್ತಬ್ಧಚಿತ್ರವು ಪ್ರಥಮ ಸ್ಥಾನ ಪಡೆದು ಕೊಂಡಿದೆ. ನಿಗಮ ಮಂಡಳಿಯ ವಿಭಾಗದಲ್ಲಿ ವಾರ್ತಾ ಇಲಾಖೆ ಸ್ತಬ್ಧಚಿತ್ರ ಮೊದಲ ಬಹುಮಾನ ಪಡೆದುಕೊಂಡಿದೆ.
ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಜಿಲ್ಲೆಗಳ ಹಾಗೂ ನಿಗಮ ಮಂಡಳಿಗಳ ಅತ್ಯುತ್ತಮ ಸ್ತಬ್ಧಚಿತ್ರಗಳಿಗೆ ಮೈಸೂರು ಜಿಲ್ಲಾಡಳಿತ ಪ್ರಶಸ್ತಿ ಪ್ರಕಟಿಸಿದ್ದು, ಇದರಲ್ಲಿ ಮಂಡ್ಯದ ಕೊಕ್ಕರೆ ಬೆಳ್ಳೂರು ಪ್ರಕೃತಿ ಸೊಬಗು ಅನಾವರಣಗೊಳಿಸಿದ್ದ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ನೀಡಲಾಗಿದೆ.
ಧಾರವಾಡದ ಇಸ್ರೋ ಗಗನಯಾನದಲ್ಲಿ ಹಣ್ಣಿನನ ನೊಣಗಳು ಸ್ತಬ್ಧಚಿತ್ರಕ್ಕೆ ದ್ವಿತೀಯ, ಚಾಮರಾಜನಗರ ಜಿಲ್ಲೆಯ ಸೋಲಿಗರ ಸೊಗಡು ಒಮ್ಮೆ ನೀ ಬಂದು ನೋಡು ಸ್ತಬ್ಧಚಿತ್ರಕ್ಕೆ ತೃತೀಯ ಬಹುಮಾನ ಘೋಷಿಸಲಾಗಿದೆ. ಸಮಾಧಾನಕರ ಬಹುಮಾನವನ್ನು ಉಡುಪಿ, ಗದಗ, ಮೈಸೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ಸ್ತಬ್ಧಚಿತ್ರಗಳು ಪಡೆದುಕೊಂಡಿವೆ.