ಕುಂದಾಪುರ: ನಿನ್ನೆ ಮಂಡ್ಯ ಜಿಲ್ಲೆಯ ನಾಗಮಮಂಗಲದಲ್ಲಿ ಮೊದಲ ಕರೊನಾ ಸೋಂಕಿತ ಪತ್ತೆಯಾಗಿದ್ದಾನೆ. ಈತ ಮುಂಬೈನಿಂದ ಖರ್ಜೂರ ಸಾಗಾಟದ ವಾಹನದಲ್ಲಿ ಕೆಲವು ದಿನಗಳ ಹಿಂದೆ ಬಂದಿದ್ದ. ಆದರೆ ನಿನ್ನೆ ಅವನಲ್ಲಿ ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು.
ಈ ಮಧ್ಯೆ ಇನ್ನೊಂದು ಆತಂಕ ಶುರುವಾಗಿದೆ. ಆತ ಮುಂಬೈನಿಂದ ವಾಹನದಲ್ಲಿ ಬಂದು, ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಪೆಟ್ರೋಲ್ ಬಂಕ್ನಲ್ಲಿದ್ದ ಸ್ನಾನ ಗೃಹದಲ್ಲಿ ಸ್ನಾನ ಮಾಡಿದ್ದಾನೆ. ಅಷ್ಟೇ ಅಲ್ಲ, ಪೆಟ್ರೋಲ್ ಬಂಕ್ ಆವರಣದಲ್ಲಿಯೇ ಕೆಲವು ಹೊತ್ತು ಇದ್ದ ಎಂಬುದು ಆರೋಗ್ಯ ಇಲಾಖೆ ಮತ್ತು ಪೊಲೀಸರ ಪರಿಶೀಲನೆ ವೇಳೆ ದೃಢವಾಗಿದೆ.
ಹೀಗಾಗಿ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಮಾಲೀಕನ ಸಹಿತ ಒಟ್ಟು ಏಳು ಮಂದಿಯನ್ನು ಮತ್ತು ಲಾರಿ ತಪಾಸಣೆ ಮಾಡಿದ್ದ ಮತ್ತು ಅವರ ಜತೆಗಿದ್ದ ಸಾಸ್ತಾನ ಟೋಲ್ನ ಆರು ಮಂದಿಯನ್ನು ಕ್ವಾರಂಟೈನ್ಗೆ ಕಳಿಸಲಾಗಿದೆ.
ಸೋಂಕಿತ ವ್ಯಕ್ತಿ ಮುಂಬೈನಿಂದ ಕದ್ದಮುಚ್ಚಿ ಲಾರಿಯಲ್ಲಿ ಬಂದು ಮಂಡ್ಯ ತಲುಪಿಕೊಂಡಿದ್ದ. ನಿನ್ನೆ ಕರೊನಾ ದೃಢಪಟ್ಟ ಬೆನ್ನಲ್ಲೇ ಆತನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ತನ್ನ ಟ್ರಾವೆಲ್ ಹಿಸ್ಟರಿಯನ್ನು ಆತನೇ ಹೇಳಿಕೊಂಡಿದ್ದಾನೆ. ನಾನು ಮುಂಬೈನಿಂದ ಆಗಮಿಸಿದ್ದೇನೆ. ಶಿರೂರು ಮತ್ತು ಸಾಸ್ತಾನ ಚೆಕ್ ಪೋಸ್ಟ್ ಮಧ್ಯ ಇರುವ ಪೆಟ್ರೋಲ್ ಬಂಕ್ ಒಂದರಲ್ಲಿ ಲಾರಿಗೆ ಪೆಟ್ರೋಲ್ ಹಾಕಿಸಲಾಯಿತು. ಅಲ್ಲಿಯೇ ಸ್ನಾನ ಮಾಡಿ, ರಾತ್ರಿ ಅಲ್ಲೇ ಉಳಿದುಕೊಂಡಿದ್ದೆವು. ಮುಂಜಾನೆ ಮತ್ತದೇ ಲಾರಿಯಲ್ಲೇ ಸಾಗಿ ಮಂಡ್ಯ ತಲುಪಿದಿದ್ದಾಗಿ ಮಾಹಿತಿ ನೀಡಿದ್ದ.
ಆತನ ಹೇಳಿಕೆ ಅನ್ವಯ ಈ ಎರಡು ಚೆಕ್ಪೋಸ್ಟ್ಗಳ ಮಧ್ಯ ಇರುವ ಹಲವು ಪೆಟ್ರೋಲ್ ಬಂಕ್ಗಳ ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲನೆ ಮಾಡಲಾಗಿತ್ತು. ಈ ವೇಳೆ ತೆಕ್ಕಟ್ಟೆ ಪೆಟ್ರೋಲ್ಬಂಕ್ನ ಸಿಸಿಟಿವಿ ಕ್ಯಾಮರಾದಲ್ಲಿ ಲಾರಿ ನಿಂತಿದ್ದು ಕಂಡುಬಂದಿದೆ.
ಇದೀಗ ನಾಗಮಂಗಲದ ಕರೊನಾ ಸೋಂಕಿತನಿಂದಾಗಿ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸೀಲ್ ಡೌನ್ ಆಗಿದೆ. ಸದ್ಯ ಜಿಲ್ಲಾಡಳಿತ, ಆರೋಗ್ಯ ಇಲಾಖೆಗಳು ಆ ಪ್ರದೇಶಗಳ ಮೇಲೆ ತೀವ್ರ ನಿಗಾ ಇಟ್ಟಿವೆ.
ನಿನ್ನೆ ತಡರಾತ್ರಿಯವರೆಗೂ ಅಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಬೈಂದೂರು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರೇಮಾನಂದ ಹಾಗೂ ಕೋಟ ಪಿಎಸ್‌ಐ ನಿತ್ಯಾನಂದ ಗೌಡ ಹಾಗೂ ಸಿಬ್ಬಂದಿ ತಡರಾತ್ರಿಯವರೆಗೂ ತೆಕ್ಕಟ್ಟೆಯಲ್ಲಿದ್ದು ಪರಿಶೀಲನೆ ನಡೆಸಿದ್ದಾರೆ.