ನ್ಯೂಸ್

ಮಲೆನಾಡಲ್ಲಿ ಮಾಂಡೌಸ್ ಎಫೆಕ್ಟ್, ಬೆಳೆ ನಷ್ಟ ವರದಿಗೆ ಸೂಚನೆ

ಶಿವಮೊಗ್ಗ: ಮಾಂಡೌಸ್ ಚಂಡಮಾರುತದಿಂದ ಜಿಲ್ಲೆಯ ಕೆಲ ತಾಲೂಕಿನಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದು ಬೆಳೆ ನಷ್ಟ ವರದಿ ನೀಡುವಂತೆ ಎಲ್ಲ ತಹಸೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.

ಡಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಂಡೌಸ್‌ನಿಂದ ಕಟಾವಿಗೆ ಬಂದಿದ್ದ ಭತ್ತ ಹಾನಿಗೊಳಗಾಗಿರುವ ಬಗ್ಗೆ ಮಾಹಿತಿ ಇದೆ. ಹಾಗಾಗಿ ಆಯಾ ತಾಲೂಕಿನ ಬೆಳೆ ಹಾನಿಗೆ ಒಳಗಾದ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಸಮೀಕ್ಷೆ ನಡೆಸಿ ವಾಸ್ತವ ವರದಿ ನೀಡುವಂತೆ ಸೂಚಿಸಲಾಗಿದೆ ಎಂದರು.

ಕಂದಾಯ ಮತ್ತು ಕೃಷಿ ಇಲಾಖೆಯಿಂದ ಜಂಟಿ ವರದಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪ್ರಾಥಮಿಕ ಮಾಹಿತಿಯಂತೆ ಹೊಸನಗರ, ತೀರ್ಥಹಳ್ಳಿ ಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಉಳಿದ ತಾಲೂಕಿನಲ್ಲಿ ಹೆಚ್ಚಿನ ಹಾನಿ ಸಂಭವಿಸಿಲ್ಲ. ಆದರೂ ಎಲ್ಲ ತಾಲೂಕಿನಲ್ಲೂ ಸಮೀಕ್ಷೆ ನಡೆಸಿ ತ್ವರಿತವಾಗಿ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ ಎಂದು ಹೇಳಿದರು.