ನ್ಯೂಸ್

ಸೈಕ್ಲೋನ್​ ಎಫೆಕ್ಟ್​: ಬೆಂಗಳೂರು ಸೇರಿದಂತೆ ಹಲವೆಡೆ ರಾತ್ರಿಯಿಡೀ ತುಂತುರು ಮಳೆ, ರಾಜ್ಯದಲ್ಲಿ ಥಂಡಿ ವಾತಾವರಣ

ಬೆಂಗಳೂರು: ಮಾಂಡೌಸ್​ ಚಂಡಮಾರುತ ಪರಿಣಾಮ ನಗರದಲ್ಲಿ ಶುಕ್ರವಾರ ರಾತ್ರಿಯಿಂದಲೂ ತುಂತುರು ಮಳೆ ಸುರಿಯುತ್ತಿದ್ದು, ಮೋಡ ಕವಿದ ವಾತಾವರಣವಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಥಂಡಿ ಅನುಭವವಾಗುತ್ತಿದೆ.

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಮಾಂಡೌಸ್​ ಚಂಡಮಾರುತವು ಶುಕ್ರವಾರ ತಡರಾತ್ರಿ ತಮಿಳುನಾಡು ಕರಾವಳಿಗೆ ಅಪ್ಪಳಿಸಿದ್ದು, ಭಾರಿ ಮಳೆಯಾಗುತ್ತಿದೆ. ತಮಿಳುನಾಡಿನ ಉತ್ತರ, ಪುದುಚೇರಿ ಹಾಗೂ ಆಂಧ್ರಪ್ರದೇಶ ಶ್ರೀಹರಿಕೋಟಾದ ತೀರ ಪ್ರದೇಶಗಳಲ್ಲಿ ಚಂಡಮಾರುತ ಹಾದು ಹೋಗಲಿದ್ದು, ಈ ವೇಳೆ ಗಂಟೆಗೆ 65ರಿಂದ 70 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ತಮಿಳುನಾಡಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕರ್ನಾಡಕದಲ್ಲೂ ಇದರ ಪರಿಣಾಮ ಬೀರಿದೆ. ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಹಾಸನ, ಬಾಗಲಕೋಟೆ, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಗುಡುಗು ಮಿಂಚು ಸಹಿತ ಮಳೆ ಬೀಳಲಿದೆ. ಮೋಡ ಕವಿದ ವಾತಾವರಣ ಇರುವುದರಿಂದ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಸರಾಸರಿ 4ರಿಂದ 8 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ಕುಸಿತವಾಗಿದೆ.

ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರ, ಚಿಕ್ಕಮಗಳೂರ, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆಯಲ್ಲಿ ನಾಳೆ-ನಾಡಿದ್ದು ಭಾರಿ ಮಳೆ ಬೀಳುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​​ ಘೋಷಿಸಿದೆ. ಸದ್ಯ ಎಲ್ಲೆಡೆ ಥಂಡಿ ವಾತಾವರಣ ಇದ್ದು, ತುಂತುರು ಮಳೆಯಾಗುತ್ತಿದೆ.