ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ ಡಿಸಿ, ಸಿಇಒಗಳ ಜತೆ ಸಭೆ ನಡೆಸಿದರು. ಸಚಿವರಾದ ಅಶೋಕ್, ಸುನೀಲ್ ಕುಮಾರ್, ಸಿ.ಸಿ. ಪಾಟೀಲ್, ಸೋಮಣ್ಣ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಇದ್ದರು. 
ನ್ಯೂಸ್

ಅಧಿಕಾರಿಗಳೇ ದಾರಿ ತೋರಲಿ: ಬಗರ್​ಹುಕುಂ ಮಂಜೂರಿಗೆ ಕಡ್ಡಾಯ ಕ್ರಮ, ಸಿಎಂ ಸ್ಪಷ್ಟ ನಿರ್ದೇಶನ

ಬೆಂಗಳೂರು: ಭೂ ವ್ಯಾಜ್ಯಗಳಿಗೆ ಕಾರಣವಾಗುವ ಪ್ರಮುಖ ಸಮಸ್ಯೆಯೊಂದಕ್ಕೆ ರಾಜ್ಯ ಸರ್ಕಾರ ಪರಿಹಾರ ಕಂಡುಕೊಂಡಿದೆ. ರಾಜ್ಯದಲ್ಲಿ ರೈತರ ಜಮೀನಿಗೆ ನಕಾಶೆ ದಾರಿ ಬದಲಿಗೆ ಯಾವುದಾದರೂ ದಾರಿಯನ್ನು 30 ವರ್ಷಗಳಿಂದ ಬಳಸುತ್ತಿದ್ದರೆ, ಅದನ್ನೇ ಅಧಿಕೃತ ದಾರಿಯನ್ನಾಗಿಸಲು ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ಸೋಮವಾರ ನಡೆದ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒಗಳ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ನಿಟ್ಟಿನಲ್ಲಿ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಸಭೆಯ ಬಳಿಕ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು. ಸಿಎಂ ಇಡೀ ದಿನ ಪ್ರಗತಿ ಪರಿಶೀಲನೆ ಸಭೆ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ನಾನಾ ಕಾರಣಕ್ಕೆ ಜಮೀನಿನ ದಾರಿ ವ್ಯಾಜ್ಯಗಳು ಹೆಚ್ಚುತ್ತಿದ್ದು, ಅದನ್ನು ಇತ್ಯರ್ಥಪಡಿಸುವುದು ಕಷ್ಟವಾಗುತ್ತಿದೆ ಎನ್ನುವ ವಿಷಯವನ್ನು ಅಧಿಕಾರಿಗಳು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈ ಸೂಚನೆ ನೀಡಿದ್ದಾರೆ ಎಂದರು. ಬಗರ್​ಹುಕುಂನಲ್ಲಿ ಜಮೀನು ಮಂಜೂರು ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ರಸ್ತೆ ಸಂಪರ್ಕವನ್ನು ನಮೂದಿಸಲು ನಿರ್ದೇಶನ ಕೊಡಲಾಗಿದೆ. ಒಂದು ವೇಳೆ ದಾರಿಯನ್ನೆ ಒತ್ತುವರಿ ಮಾಡಿದ್ದರೆ, ಅದನ್ನು ಬಿಡಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ ಎಂದು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು.

ಕಂದಾಯ ಇಲಾಖೆಯ ಪೌತಿ ಖಾತೆಗಳನ್ನು ಮಾಡಿ ಜಮೀನು ಸಮಸ್ಯೆಗಳನ್ನು ಇತ್ಯರ್ಥಪಡಿಸಲು ತಹಸೀಲ್ದಾರ್ ಹಂತಕ್ಕೆ ಅಧಿಕಾರ ನೀಡಲಾಗಿದೆ ಎಂದರು. ಕಂದಾಯ ಇಲಾಖೆ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅಪರ ಜಿಲ್ಲಾಧಿಕಾರಿಗೂ ಸೂಚಿಸಲಾಗಿದೆ ಎಂದು ತಿಳಿಸಿದರು.

ಫಲಾನುಭವಿಗಳ ಖಾತೆಗೆ ಹಣ: ಸರ್ಕಾರದ ನಾನಾ ಯೋಜನೆಗಳಲ್ಲಿ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗದೆ ತಾಂತ್ರಿಕ ಕಾರಣಗಳಿಗಾಗಿ ಬಾಕಿ ಆಗುತ್ತಿರುವುದು ಗಮನಕ್ಕೆ ಬಂದಿದೆ. ರೈತಾಪಿ ಜನರಿಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಮತ್ತು ಅಧಿಕಾರಿಗಳೇ ಮಾಹಿತಿ ಪಡೆದು ಬ್ಯಾಂಕ್​ಗೆ ಆಧಾರ್ ಲಿಂಕ್ ಮಾಡಿಕೊಡುವ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

ಕೃಷಿ, ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಉಪಕರಣ ನೀಡಲಾಗುತ್ತಿದೆ. ಯಾಂತ್ರೀಕೃತ ಕೃಷಿ ಯೋಜನೆಗೆ ಆನ್​ಲೈನ್ ಮೂಲಕ ಅರ್ಜಿ ಹಾಕಬೇಕಿತ್ತು. ಈ ಪ್ರಕ್ರಿಯೆಯನ್ನು ಸರಳೀಕರಿಸಿ ಆನ್​ಲೈನ್ ಮತ್ತು ಆಫ್​ಲೈನ್ ಮೂಲಕವೂ ಅರ್ಜಿ ಪಡೆಯಲು ತೀರ್ವನಿಸಲಾಗಿದೆ ಎಂದರು.

ಘನ ತ್ಯಾಜ್ಯ ಘಟಕ: ಪ್ರತಿ ಗ್ರಾಮ ಪಂಚಾಯಿತಿಗಳನ್ನು ಕ್ಲಸ್ಟರ್ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ಘನತ್ಯಾಜ್ಯ ನಿರ್ವಹಣೆಗೆ 15 ಸಾವಿರ ಹಳ್ಳಿಗಳಲ್ಲಿ ಡಿಪಿಎಆರ್ ಮಾಡಲಾಗಿದೆ. ಅಮೃತ್ ಗ್ರಾಮ ಪಂಚಾಯಿತಿ ಯೋಜನೆಯಡಿಯಲ್ಲಿ ತಾಲ್ಲೂಕಿನಲ್ಲಿ ಐದಾರು ಗ್ರಾಮ ಗುರುತು ಮಾಡಿ ಸಿಎಂ ವಿಶೇಷ ಅನುದಾನವನ್ನು ಖರ್ಚು ಮಾಡಲು ಸೂಚಿಸಲಾಗಿದೆ. ಸಮಸ್ಯೆಗಳಿದ್ದರೆ ಸರ್ಕಾರದ ಗಮನಕ್ಕೆ ತಂದು ಬಗೆಹರಿಸಲು ಸೂಚಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

ಒತ್ತುವರಿ ತೆರವಿಗೆ ಕ್ರಮ: ಕೆರೆ-ಕಟ್ಟೆಗಳ ನೀರು ಸರಾಗವಾಗಿ ಹರಿದು ಹೋಗುತ್ತಿದ್ದ ಮಾರ್ಗಗಳಲ್ಲಿ ಹೂಳು ತುಂಬಿದ್ದರೆ ಅದನ್ನು ತೆಗೆಸಬೇಕು. ಒತ್ತುವರಿ ಆಗಿದ್ದರೆ ಕೂಡಲೆ ತೆರವು ಮಾಡಿಸಿ ಅಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನೀರು ಕಾಲುವೆಗಳು ಒತ್ತುವರಿ ಆಗಿರುವ ಕಾರಣದಿಂದಲೇ ತೋಟ, ಗದ್ದೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದ ಪ್ರಕರಣಗಳಲ್ಲಿ ಅದನ್ನು ಪರಿಹಾರಕ್ಕೆ ಪರಿಗಣಿಸಿ ಕೊಡುವ ವ್ಯವಸ್ಥೆ ಮಾಡಬೇಕು ಎಂದು ಮಾಧುಸ್ವಾಮಿ ತಿಳಿಸಿದರು.

ಅನುದಾನ ಹೆಚ್ಚಳ: ಚರಂಡಿ ನಿರ್ಮಾಣ ಮತ್ತು ಅಂಗನವಾಡಿ, ಶಾಲೆಗಳ ಕಟ್ಟಡ ನಿರ್ವಣಕ್ಕೆ ಈ ಯೋಜನೆಯ ಅನುದಾನ ಬಳಕೆ ಮಾಡಲು ಮತ್ತು ಈ ಹಿಂದೆ ಅಂಗನವಾಡಿ ಕಟ್ಟಡಗಳಿಗೆ 5 ಲಕ್ಷ ರೂ. ಇದ್ದ ಅನುದಾನವನ್ನು 8 ಲಕ್ಷ ರೂ.ಗಳಿಗೆ ಏರಿಕೆ ಮಾಡಿ ಪ್ರಸ್ತಾವನೆ ಕಳುಹಿಸಲು ತೀರ್ವನಿಸಲಾಗಿದೆ.

ಜಲ ಜೀವನ್ ಯೋಜನೆಗೆ ಗಡುವು: ಕುಡಿಯುವ ನೀರು ಒದಗಿಸುವ ಜಲ ಜೀವನ್ ಯೋಜನೆಯ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗಾಗಿ ಮುಗಿಸಬೇಕು. ನರೇಗಾ ಗುರಿಯನ್ನು ದುಪ್ಪಟ್ಟು ಮಾಡಬೇಕು ಎಂದು ಜಿಪಂ ಸಿಇಒಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ 9 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಜಲಜೀವನ್ ಯೋಜನೆಯಲ್ಲಿ ಪ್ರತಿ ಮನೆಗೆ ನಲ್ಲಿ ನೀರು ಪೂರೈಸಬೇಕು. ನರೇಗಾದಲ್ಲಿ ನಿಗದಿತ ಪ್ರಮಾಣದಲ್ಲಿ ಪ್ರಗತಿ ಆಗಿಲ್ಲ. ಈ ಯೋಜನೆಯ ಗುರಿಯನ್ನು ಎರಡು ಪಟ್ಟು ಹೆಚ್ಚಿಸಿ ಹೆಚ್ಚುವರಿ ಅನುದಾನ ತರುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಸರ್ಕಾರದ ಯೋಜನೆಗಳ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಮಾಡಲೇಬೇಕು. ನರೇಗಾ ಯೋಜನೆಯಲ್ಲಿ ಜಿಲ್ಲೆಯನ್ನು ಘಟಕವನ್ನಾಗಿ ಮಾಡುವುದನ್ನು ಬದಲಿಸಿ, ತಾಲೂಕು ಘಟಕ ಎಂದು ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.