ನ್ಯೂಸ್

ಮಂಚು ಮನೋಜ್ ಪೋಸ್ಟ್​ ವೈರಲ್..!: ಸಹೋದರನ ಬಗ್ಗೆ ಹೇಳಿದ್ದೇನು?: ಏನ್​ ಬ್ರೊ ಏನಾಯ್ತು ಅಂದ್ರು ಜನ! | Kannappa

Kannappa: ತೆಲುಗು ಸೂಪರ್​ಸ್ಟಾರ್​, ದಿಗ್ಗಜ ಮೋಹನ್​​ ಬಾಬು ನಿರ್ಮಾಣದ ಹಾಗೂ ಅವರ ಮಗ ಮಂಚು ವಿಷ್ಣು ನಟನೆ ಬಹುನಿರೀಕ್ಷಿತ ಚಲನಚಿತ್ರ 'ಕಣ್ಣಪ್ಪ' ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ನಾಳೆ(ಜೂ.27) ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.

ತೆಲುಗು ಮಾತ್ರವಲ್ಲದೆ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೂ ಸಹ ಉನ್ನತ ತಾರೆಯರಾದ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ಕಾಜಲ್ ಅಗರ್ವಾಲ್ ಮತ್ತು ಶರತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವುದರಿಂದ, ದೇಶಾದ್ಯಂತ ನಿರೀಕ್ಷೆಗಳು ಉತ್ತುಂಗಕ್ಕೇರಿವೆ.

ಭಾರತೀಯ ಸಂಸ್ಕೃತಿ, ಭಕ್ತಿ ಹಾಗೂ ತ್ಯಾಗದ ಸಂಯೋಜಿತ ಒಳಗೊಂಡ ಕಣ್ಣಪ್ಪ ಭಕ್ತಿ ಪ್ರಧಾನ ಚಿತ್ರವಾಗಿದೆ. ವಿಶ್ವಾದ್ಯಾಂತ ಬಿಡುಗಡೆಯಾಗಲಿದೆ. ದಕ್ಷಿಣ ಚಿತ್ರರಂಗದ ಹಲವು ಗಣ್ಯರು ಸೇರಿ ಬಾಲಿವುಡ್​ನ ಕಲಾವಿದರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಮಂಚು ಮನೋಜ್​​(ಮೋಹನ್​​ ಬಾಬು ಹಿರಿಯ ಮಗ) ಚಿತ್ರದ ಕುರಿತು ಹಾಕಿದ ಪೋಸ್ಟ್​​ ಇದೀಗ ವೈರಲ್​ ಆಗಿದೆ.

ಮನೋಜ್​​ ಹೇಳಿದ್ದೇನು..?

"ಕಣ್ಣಪ್ಪ ತಂಡಕ್ಕೆ ನನ್ನ ಶುಭಾಶಯಗಳು. ನನ್ನ ತಂದೆ (ಮೋಹನ್ ಬಾಬು) ಮತ್ತು ಅವರ ತಂಡವು ಹಲವು ವರ್ಷಗಳಿಂದ ಈ ಚಿತ್ರಕ್ಕಾಗಿ ಬಹಳ ಪ್ರೀತಿ ಮತ್ತು ಸಮರ್ಪಣೆಯಿಂದ ಕೆಲಸ ಮಾಡಿದೆ. ಈ ಚಿತ್ರವು ಅದ್ಭುತ ಯಶಸ್ಸನ್ನು ಕಾಣಲಿ ಎಂದು ನಾನು ಪ್ರಾಮಾಣಿಕವಾಗಿ ಹಾರೈಸುತ್ತೇನೆ" ಎಂದು ಹೇಳಿದ್ದಾರೆ. ತಂದೆ ಮೋಹನ್ ಬಾಬು ಅವರ ಪ್ರಯತ್ನಗಳನ್ನು ಶ್ಲಾಘಿಸುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.

ಇದಲ್ಲದೆ, ಮನೋಜ್ ತಮ್ಮ ಟ್ವೀಟ್‌ನಲ್ಲಿ ಕೆಲವು ಹೃದಯಸ್ಪರ್ಶಿ ಮಾತುಗಳನ್ನು ಕೂಡ ಸೇರಿಸಿದ್ದಾರೆ. "ನನ್ನ ಪುಟ್ಟ ಚಾಂಪಿಯನ್‌ಗಳಾದ ಅರಿಯಾನಾ, ವಿವಿಯಾನಾ ಮತ್ತು ಅವ್ರಾಮ್ (ಮಂಚು ವಿಷ್ಣು ಅವರ ಮಕ್ಕಳು) ಬೆಳ್ಳಿ ಪರದೆಯ ಮೇಲೆ ಒಳ್ಳೆಯ ನೆನಪುಗಳನ್ನು ಹಂಚಿಕೊಳ್ಳುವುದನ್ನು ನೋಡಲು ನಾನು ಕಾತುರದಿಂದ ಕಾಯುತ್ತಿದ್ದೇನೆ" ಎಂದು ಅವರು ಬರೆದಿದ್ದಾರೆ. ಇದಲ್ಲದೇ ಚಿತ್ರದಲ್ಲಿ ನಟಿಸಿದ ಕಲಾವಿದರಿಗೆ ಬಗ್ಗೆ ಕೂಡ ಮಾತನಾಡಿದ್ದಾರೆ.

ಸಹೋದರ ಬಗ್ಗೆ ಮಾತನಾಡದ ಮನೋಜ್​​

ಆದಾಗ್ಯೂ, ಈ ದೀರ್ಘ ಮತ್ತು ಭಾವನಾತ್ಮಕ ಟ್ವೀಟ್‌ನಲ್ಲಿ, ಮನೋಜ್ ತನ್ನ ತಂದೆ, ವಿಷ್ಣು ಅವರ ಮಕ್ಕಳು ಮತ್ತು ಚಿತ್ರದ ಇತರ ಸೆಲೆಬ್ರಿಟಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ. ಆದರೆ, ಅವರು ತಮ್ಮ ಸಹೋದರ ಮಂಚು ವಿಷ್ಣು ಅವರ ಹೆಸರನ್ನು ಎಲ್ಲಿಯೂ ಉಲ್ಲೇಖಿಸದಿರುವುದು ಗಮನಾರ್ಹ. ಮಂಚು ಸಹೋದರರು ಉತ್ತಮ ಸಂಬಂಧದಲ್ಲಿಲ್ಲ ಮತ್ತು ವಿಷ್ಣು ಮತ್ತು ಮನೋಜ್ ನಡುವೆ ಕೆಲವು ಸಮಯದಿಂದ ಭಿನ್ನಾಭಿಪ್ರಾಯಗಳಿವೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ, ಈ ಟ್ವೀಟ್ ಆ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿನ್ನೆಲೆ ನೆಟ್ಟಿಗರು ಹಲವಾರು ತರಹೇವಾರಿ ಕಾಮೆಂಟ್​ ಮಾಡಿದ್ದಾರೆ. ಒಬ್ಬರು ಏನ್​ ಬ್ರೊ ಕೋಪ ಕಡಿಮೆಯಾಗಿಲ್ವೇ ಎಂದಿದ್ದಾರೆ.(ಏಜೆನ್ಸೀಸ್​​)