ನ್ಯೂಸ್

ಸಿಎಂ ನೇತೃತ್ವದಲ್ಲಿ ಸಿದ್ಧತಾ ಪೂರ್ವಭಾವಿ ಸಭೆ; ಬೀದರ್ ನಿಂದ ಚಾಮರಾಜನಗರದ ತನಕ 2500 ಕಿ.ಮೀ. ಉದ್ದದ ಮಾನವ ಸರಪಳಿ

ಬೆಂಗಳೂರು:
ಪ್ರಜಾಪ್ರಭುತ್ವಕ್ಕೆ ಎಂಥದ್ದೆ ಆತಂಕ ಎದುರಾದರೂ ಅದನ್ನು ಎದುರಿಸಿ ನಿಲ್ಲುವ ಮೂಲಕ ಪ್ರಜಾಪ್ರಭುತ್ವ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಸೆ.15ರಂದು ವಿಶ್ವಪ್ರಜಾಪ್ರಭುತ್ವ ದಿನದ ಅಂಗವಾಗಿ ವಿಧಾನಸೌಧದಲ್ಲಿ ಏರ್ಪಡಿಸಿದ್ದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿ, ಬೀದರ್ ನಿಂದ ಚಾಮರಾಜನಗರದ ತನಕ 2500 ಕಿ.ಮೀ. ಉದ್ದದ ಮಾನವ ಸರಪಳಿ ಮತ್ತು ಪ್ರಜಾಪ್ರಭುತ್ವ ಸಂಭ್ರಮಾಚರಣೆ ಯಶಸ್ವಿಯಾಗಲಿ ಎಂದರು.
ಪ್ರಜಾಪ್ರಭುತ್ವ ನಾಶ ಮಾಡಲು ಯತ್ನಿಸುತ್ತಿರುವ ದುಷ್ಟ ಶಕ್ತಿಗಳು ಹೆಚ್ಚೇನು ಇಲ್ಲ. ಅವರು ಕಡಿಮೆ ಸಂಖ್ಯೆಯಲ್ಲಿದ್ದರೂ ಹೆಚ್ಚು ಚಟುವಟಿಕೆ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವವಾದಿಗಳು ಹೆಚ್ಚು ಪ್ರಮಾಣದಲ್ಲಿದ್ದರೂ ಅವರು ಹೆಚ್ಚು ಕ್ರಿಯಾಶೀಲವಾಗಿಲ್ಲ ಎಂದರು.
ಪ್ರಜಾಪ್ರಭುತ್ವಕ್ಕೆ ಕೊಡಲಿ ಪೆಟ್ಟು ನೀಡುವ ಶಕ್ತಿಯ ವಿರುದ್ದ ಸೆಟೆದು ನಿಲ್ಲಬೇಕು. ಪ್ರಜಾಪ್ರಭುತ್ವ ನಾಶಕ್ಕೆ ಯತ್ನಿಸುತ್ತಿರುವವರನ್ನು ನಾವು ಸಮರ್ಥವಾಗಿ ಎದುರಿಸಬೇಕು ಎಂದು ಸಿಎಂ ಕರೆ ನೀಡಿದರು.
ಐತಿಹಾಸಿಕ ಮಾನವ ಸರಪಳಿ ಚಳವಳಿಯನ್ನು ಯಶಸ್ವಿಗೊಳಿಸಬೇಕು. ನಾನೂ ವಿಧಾನಸೌಧದ ಎದುರು ಮಾನವ ಸರಪಳಿಯಲ್ಲಿ ಇರುತ್ತೇನೆ. ಎಲ್ಲರೂ ಭಾಗವಹಿಸುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಪ್ರಜಾಪ್ರಭುತ್ವಕ್ಕೆ ತನ್ನದೇ ಆದ ಮಹತ್ವವಿದೆ. ಸಂವಿಧಾನ ಉಳಿದರೆ ಮಾತ್ರ ದೇಶದ ಅಭಿವೃದ್ಧಿ ಮತ್ತು ಸಾಮಾಜಿಕ ಬದಲಾವಣೆ ಸಾಧ್ಯ ಎಂದರು.
ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಚಿವ ರಹೀಂ ಖಾನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಾಸೀರ್ ಅಹಮದ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ 200ಕ್ಕೂ ಹೆಚ್ಚು ಸ್ವಯಂ ಸೇವಾ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಜೂಮ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದವು.