ರಾಮನಗರ : ಹಣ ಯಾರದ್ದಾದರೇನು ಮನೆ ಕಟ್ಟಿದರಾಯ್ತು ಎನ್ನುವ ಕೆಟ್ಟ ಬುದ್ಧಿ ಒಬ್ಬನಿಗೆ, ಮತ್ತೊಬ್ಬ ಸುಮ್ಮನೆ ಕೂರಲು ಆಗದೆ ಕಳ್ಳತನವನ್ನಾದರೂ ಮಾಡಬೇಕು ಎನ್ನುವವ, ಮಗದೊಬ್ಬ ಕಾನೂನು ಪದವೀಧರನಾದರೂ ಕೆಲಸವಿಲ್ಲದೆ ಕದಿಯುವುದನ್ನೇ ಕಾಯಕ ಮಾಡಿಕೊಂಡಿದ್ದ...
ಹೀಗೆ ರಾಮನಗರ ಜಿಲ್ಲಾ ಪೊಲೀಸರು ಕಳೆದ ಕೆಲ ದಿನಗಳಿಂದ ನಡೆಸಿದ ಖದೀಮರ ಬೇಟೆ ರೋಚಕ ಘಟನೆಗಳಿಗೆ ಸಾಕ್ಷಿಯಾಗಿದೆ. ಬರೋಬ್ಬರಿ 2.93 ಕೋಟಿ ರೂ. ಮೌಲ್ಯದ ಚಿನ್ನಾಭರಣ ಸಹಿತ ನಗದು ವಶಕ್ಕೆ ಪಡೆದು 6 ಆರೋಪಿಗಳನ್ನು ಬಂಧಿಸಿದ್ದರೆ, ರೋಚಕ ಘಟನೆಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬ್ಯಾಂಕ್ ಲೂಟಿ ಮಾಡಿದ ಮ್ಯಾನೇಜರ್: ಮನೆ ಕಟ್ಟುವ ಆಸೆಯಿಂದ ಕೆಲಸ ಮಾಡುವ ಬ್ಯಾಂಕ್ ಲೂಟಿ ಮಾಡಿದ ಮ್ಯಾನೇಜರ್‌ನನ್ನು ಬಂಧಿಸಿರುವ ಪೊಲೀಸರು 4.7 ಕೆ.ಜಿ. ಚಿನ್ನಾಭರಣ ಸೇರಿ ಒಟ್ಟು 2.4 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೀಣ್ಯ ವಾಸಿಯಾಗಿದ್ದ ಅನಂತನಾಗ್ (32) ಕನಕಪುರ ತಾಲೂಕಿನ ಹೊನ್ನಿಗನಹಳ್ಳಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮ್ಯಾನೇಜರ್ ಆಗಿದ್ದ. ಈ ವೇಳೆ ನಿವೇಶನ ಖರೀದಿಸಿ ಮನೆ ಕಟ್ಟಿಕೊಳ್ಳಬೇಕು ಎನ್ನುವ ಕನಸು ಹೊಂದಿದ್ದ ಈತ, ಬ್ಯಾಂಕ್‌ನಲ್ಲಿಯೇ ಲೂಟಿಗೆ ಇಳಿದ. ಇದಕ್ಕಾಗಿ ಸ್ವ-ಸಹಾಯ ಸಂಘದ ಹೆಸರಲ್ಲಿ ತಾನೇ ಕೋಟಿಗಟ್ಟಲೆ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಂಡಿದ್ದ. ಸಾಲದ ನೋಟಿಸ್ ಸಂಘದ ಗಮನಕ್ಕೆ ಬಂದಾಗ, ಆಡಿಟ್ ಸಮಸ್ಯೆ ಆಗಿದೆ ಎಂದು ಇದನ್ನು ಸರಿಪಡಿಸಲು ಗ್ರಾಹಕರು ಸಾಲ ಪಡೆದುಕೊಳ್ಳಲು ಇಟ್ಟಿದ್ದ ಚಿನ್ನವನ್ನೇ ಕದಿಯಲು ಆರಂಭಿಸಿದ.
ಚಿನ್ನ ಪರೀಕ್ಷಕನ ವಿರುದ್ಧ ದೂರು: ಬ್ಯಾಂಕಿನಲ್ಲಿ ಗ್ರಾಹಕರು ಇಡುವ ಅಸಲಿ ಚಿನ್ನ ಕದ್ದು, ಬದಲಿಗೆ ನಕಲಿ ಚಿನ್ನ ಇಡುತ್ತಿದ್ದ. ಹೀಗೆ ಅನಂತನಾಗ್ ಬರೋಬ್ಬರಿ 9.5 ಕೆ.ಜಿ. ನಕಲಿ ಚಿನ್ನ ಇಟ್ಟಿದ್ದ. ಆದರೆ ಗ್ರಾಹಕರೊಬ್ಬರು ಚಿನ್ನ ಬಿಡಿಸಿಕೊಳ್ಳಲು ಬಂದಾಗ ನಕಲಿ ಆಗಿರುವುದು ಬೆಳಕಿಗೆ ಬಂದಾಗ, ಹಿರಿಯ ಅಧಿಕಾರಿಗಳ ಸಹಕಾರದೊಂದಿಗೆ ಚಿನ್ನ ಪರೀಕ್ಷಕ ರಾಜಣ್ಣ ಎಂಬುವರು ನಕಲಿ ಚಿನ್ನವನ್ನು ಅಸಲಿ ಚಿನ್ನ ಎಂದು ಧೃಢೀಕರಣ ನೀಡಿ ಬ್ಯಾಂಕ್‌ಗೆ ಮೋಸ ಮಾಡಿದ್ದಾರೆ ಎಂದು ಸಾತನೂರು ಠಾಣೆಗೆ ದೂರು ನೀಡಿದ್ದ.
ಘಇದಲ್ಲದೆ, 4.7 ಕೆಜಿ ಚಿನ್ನವನ್ನು ಕಾರಿನ ಡಿಕ್ಕಿಯಲ್ಲಿಯೇ ಎರಡು ವರ್ಷಗಳಿಂದ ಇಟ್ಟುಕೊಂಡು ಓಡಾಟ ಮಾಡುತ್ತಿದ್ದ. ಸದ್ಯಕ್ಕೆ ಈತನಿಂದ 4.7 ಕೆಜಿ ಅಸಲಿ ಚಿನ್ನ, ಬ್ಯಾಂಕ್‌ನಲ್ಲಿದ್ದ 9.5 ಕೆಜಿ ನಕಲಿ ಚಿನ್ನ, 23 ಲಕ್ಷ ರೂ. ನಗದು, ಒಂದು
ಸ್ವಿಫ್ಟ್ ಕಾರು, ಮತ್ತೊಬ್ಬ ಆರೋಪಿ ರಜನೀಶ್ ಬಳಕೆ ಮಾಡುತ್ತಿದ್ದ ನ್ಯಾನೋ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕಾನೂನು ಪದವೀಧರನೇ ಕಳ್ಳ: ಕುದೂರು ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಮಾಂಗಲ್ಯ ಸರ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುದೂರು ಪೊಲೀಸರು ಜೊಮ್ಯಾಟೋ ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದ ಕುಮಾರ್ (22) ಮತ್ತು ಹರೀಶ್ ಕುಮಾರ್ (24) ಎಂಬುವವರನ್ನು ಬಂಧಿಸಿದ್ದಾರೆ.
ಹರೀಶ್‌ಕುಮಾರ್ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ದೇವರಹಳ್ಳಿ ನಿವಾಸಿಯಾಗಿದ್ದು, ಬೆಂಗಳೂರಿನ ಲಗ್ಗೆರೆಯಲ್ಲಿ ವಾಸವಾಗಿದ್ದ. ಕಾನೂನು ಪದವೀಧರನಾಗಿದ್ದ ಈತ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಈ ಸಂಬಳ ಸಾಲದ ಕಾರಣ ಕೊರಟಗೆರೆ ತಾಲೂಕಿನ ದಿಣ್ಣೇಪಾಳ್ಯದವನೇ ಆದ ಕುಮಾರ್ ಜತೆ ಕಳ್ಳತನಕ್ಕೆ ಇಳಿದಿದ್ದ. ಇವರ ಬಂಧನದಿಂದ ಎರಡು ಪ್ರಕರಣಗಳು ಪತ್ತೆಯಾಗಿದ್ದು 108 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಕಳ್ಳ ಮೆಕಾನಿಕ್: ಬೆಂಗಳೂರಿನಲ್ಲಿ ಮೆಕಾನಿಕ್ ಶಾಪ್ ಇಟ್ಟುಕೊಂಡಿದ್ದರೂ ಇದನ್ನು ನಾಮ್‌ಕೇವಾಸ್ತೆ ಮಾಡಿಕೊಂಡು, ಬೈಕ್ ಮತ್ತು ಮನೆ ಕಳವು ಮಾಡುತ್ತಿದ್ದ ಆರೋಪಿಯನ್ನು ರಾಮನಗರ ಐಜೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆ ಆಜಾದ್ ನಗರ ನಿವಾಸಿ ಪ್ರವೀಣ್ ಕುಮಾರ್ ಜೈನ್ (40) ಬಂಧಿತ. ಈತನಿಂದ 3 ಚಿನ್ನಾಭರಣ ಪ್ರಕರಣಗಳಲ್ಲಿ ಒಟ್ಟು 128 ಗ್ರಾಂ ಚಿನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಇಷ್ಟೇ ಅಲ್ಲದೆ, ಈತನಿಂದ ಬೆಂಗಳೂರಿನ ಸದಾಶಿವನಗರ, ಉಪ್ಪಾರಪೇಟೆ, ಮಾಗಡಿ ರಸ್ತೆ, ನೆಲಮಂಗಲ ಠಾಣಾ ವ್ಯಾಪ್ತಿಯ 7 ದಿಚಕ್ರ ವಾಹನ ಕಳವು ಪ್ರಕರಣಗಳು ಬೆಳಕಿಗೆ ಬಂದಿದ್ದು, ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುದ್ದಿಗೋಷ್ಠಿಯಲ್ಲಿ ಡಿವೈಎಸ್‌ಪಿಗಳಾದ ಕೆ.ಎನ್.ರಮೇಶ್, ಮೋಹನ್ ಕುಮಾರ್, ವಿವಿಧ ವೃತ್ತಗಳ ಸಿಪಿಐಗಳು, ಎಸ್‌ಐಗಳು ಹಾಗೂ ಸಿಬ್ಬಂದಿ ಇದ್ದರು.