ಬೆಂಗಳೂರು: ಕೋವಿಡ್ 19 ಲಾಕ್ಡೌನ್ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಂಕಷ್ಟ ತಂದಿದೆ. ಕೆಲವರಿಗೆ ಔಷಧ ತರಲು ಸಾಧ್ಯವಾಗದಿದ್ದರೆ, ಹಲವರಿಗೆ ಬೇರೆ ಊರುಗಳಲ್ಲಿರುವ ಪಾಲಕರನ್ನು ಭೇಟಿಯಾಗಲಾರದ ಸಂಕಟ ಕಾಡುತ್ತಿದೆ. ಆದರೆ, ನಗರದ ಈ ವ್ಯಕ್ತಿಯ ಸಂಕಟ ತುಂಬಾ ವಿಶಿಷ್ಟವಾಗಿದೆ. ಈತ ಎರಡು ಮದುವೆಯಾಗಿರುವುದು ಇದಕ್ಕೆ ಕಾರಣ.
ಸಿದ್ಧ ಉಡುಪುಗಳ ಉದ್ದಿಮೆ ಹೊಂದಿರುವ ಉಮೇಶ್ (ಹೆಸರು ಬದಲಿಸಲಾಗಿದೆ) ಮೊದಲಿಗೆ ಸುಧಾ (ಹೆಸರು ಬದಲಿಸಲಾಗಿದೆ) ಎಂಬುವರನ್ನು ಮದುವೆಯಾಗಿದ್ದರು. ಇವರಿಬ್ಬರ ದಾಂಪತ್ಯದಿಂದ ಒಂದು ಗಂಡು ಮಗು ಕೂಡ ಜನಿಸಿತು. ಆದರೆ, ಉಮೇಶ್ಗೆ ನಿಧಿ (ಹೆಸರು ಬದಲಿಸಲಾಗಿದೆ) ಎಂಬಾಕೆಯಲ್ಲಿ ಅನುರಾಗ ಮೂಡಿತು. ಆಕೆಯನ್ನೂ ಮದುವೆಯಾದ ಉಮೇಶ್, ಇಬ್ಬರಿಗೂ ಗೊತ್ತಾಗದಂತೆ ಗುಟ್ಟಾಗಿ ಎರಡು ಸಂಸಾರಗಳನ್ನು ತೂಗಿಸಿಕೊಂಡು ಹೋಗುತ್ತಿದ್ದರು.
ಆದರೆ ಅದಾವುದೋ ಅನಿವಾರ್ಯತೆಗೆ ಸಿಲುಕಿದ ಉಮೇಶ್, ತಾವು ಇನ್ನೊಂದು ಮದುವೆಯಾಗಿರುವ ವಿಷಯವನ್ನು ಸುಧಾಗೆ ತಿಳಿಸಿದರು. ತಕ್ಷಣವೆ ಸುಧಾ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಮಹಿಳಾ ಸಹಾಯವಾಣಿಯನ್ನು ಸಂಪರ್ಕಿಸಿದರು. ಆದರೆ, ಪ್ರಕರಣವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯದಂತೆ ನೋಡಿಕೊಂಡ ಉಮೇಶ್, ಎರಡೂ ಸಂಸಾರವನ್ನು ನಿಭಾಯಿಸುವುದಾಗಿ ಸುಧಾಗೆ ಮನವರಿಕೆ ಮಾಡಿಕೊಟ್ಟರು. ಹಿರಿಯರ ಸಂಧಾನದ ಬಳಿಕ ಒಂದು ವಾರ ಸುಧಾ ಜತೆ ಇನ್ನೊಂದು ವಾರ ನಿಧಿ ಜತೆ ಉಮೇಶ್ ಸಂಸಾರ ಸಾಗಿಸಬೇಕು ಎಂದು ತೀರ್ಮಾನವಾಯಿತು.
ಅಂತೆಯೇ ಲಾಕ್ಡೌನ್ ಘೋಷಣೆಯಾಗುವ ಸಂದರ್ಭದಲ್ಲಿ ಉಮೇಶ್ ತಮ್ಮ ಎರಡನೇ ಪತ್ನಿ ನಿಧಿ ಮನೆಯಲ್ಲಿದ್ದರು. ಇದೀಗ ಲಾಕ್ಡೌನ್ನಿಂದಾಗಿ ಮೊದಲ ಪತ್ನಿಯ ಬಳಿಗೆ ಹೋಗಲು ಅವರಿಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ ಉಮೇಶ್ಗೆ ಪದೇಪದೆ ಕರೆ ಮಾಡಿದ ಸುಧಾ, ಮನೆಯಲ್ಲಿ ದಿನಸಿ ಮತ್ತಿತರ ವಸ್ತುಗಳೆಲ್ಲ ಖಾಲಿಯಾಗಿದ್ದು, ತಕ್ಷಣವೇ ಮನೆಗೆ ಬಂದು ಅವೆಲ್ಲವನ್ನೂ ಕೊಡಿಸುವಂತೆ ಪೀಡಿಸಲಾರಂಭಿಸಿದರು. ಲಾಕ್ಡೌನ್ ಹಿನ್ನೆಲೆಯಲ್ಲಿ ತನಗೆ ಬರಲಾಗುತ್ತಿಲ್ಲ ಎಂದು ಉಮೇಶ್ ಅಸಹಾಯಕತೆ ವ್ಯಕ್ತಪಡಿಸಿದರೂ, ಸುಧಾ ಕರೆ ಮಾಡುವನದನ್ನು ನಿಲ್ಲಿಸಲಿಲ್ಲ. ಹೀಗಾಗಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ ಸುಧಾ ತಮ್ಮ ಪತಿಯನ್ನು ಕೂಡಲೇ ತಮ್ಮ ಬಳಿಗೆ ಕರೆತರುವಂತೆ ಮನವಿ ಮಾಡಿಕೊಂಡರು. ಆದರೆ ಪೊಲೀಸರು ಉಮೇಶ್ನನ್ನು ಕರೆದೊಯ್ದು ಸುಧಾ ಬಳಿ ಬಿಟ್ಟರೆ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.