ನ್ಯೂಸ್

ನೀಟ್​ನಲ್ಲಿ ಶೇ. 99.99 ಅಂಕ ಪಡೆದಿದ್ದವ ಆತ್ಮಹತ್ಯೆ

ನವದೆಹಲಿ: ಇತ್ತೀಚೆಗಷ್ಟೇ ನೀಟ್-ಯುಜಿ ಪರೀಕ್ಷೆಯಲ್ಲಿ 99.99 ಪರ್ಸಂಟೈಲ್ ಪಡೆದ ಪ್ರತಿಭಾವಂತನೊಬ್ಬ ಡಾಕ್ಟರ್ ಆಗಲು ಇಷ್ಟವಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅನುರಾಗ್ ಅನಿಲ್ ಬೋರ್ಕರ್ (19) ಮೃತಪಟ್ಟ ದುರ್ದೈವಿ. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.

ಸಿಂದೆವಹಿ ತಾಲೂಕಿನ ನವರ್​ಗಾಂವ್​ನ ನಿವಾಸಿಯಾಗಿದ್ದ ಈತ ತಂದೆ-ತಾಯಿ ಜತೆ ನೆಲೆಸಿದ್ದ. ಒಬಿಸಿ ಕೆಟಗರಿಯಲ್ಲಿ ದೇಶದಲ್ಲಿ 1475ನೇ ರ್ಯಾಂಕ್ ಗಳಿಸಿದ್ದ ಈತ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯಬೇಕಾಗಿದ್ದ ದಿನವೇ ಸಾವಿಗೆ ಶರಣಾಗಿದ್ದಾನೆ. ಉತ್ತರಪ್ರದೇಶದ ಗೋರಖ್​ಪುರದಲ್ಲಿ ಎಂಬಿಬಿಎಸ್ ಕೋರ್ಸ್​ಗೆ ಸೇರಬೇಕಾಗಿದ್ದವ, ಅದಕ್ಕೂ ಮುನ್ನವೇ ಬದುಕಿಗೆ ಅಂತ್ಯ ಹೇಳಿದ್ದಾನೆ. ಸ್ಥಳದಲ್ಲಿ ಡೆತ್​ನೋಟ್ ಪತ್ತೆಯಾಗಿದ್ದು, ‘ನನಗೆ ಡಾಕ್ಟರ್ ಆಗಲು ಇಷ್ಟವಿಲ್ಲ’ ಎಂಬುದಾಗಿ ಅದರಲ್ಲಿ ಬರೆದಿರುವುದು ಬಹಿರಂಗವಾಗಿದೆ. ‘ಗೋರಖ್​ಪುರಕ್ಕೆ ತೆರಳುವುದಕ್ಕೂ ಮುನ್ನ ಅನುರಾಗ್ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳದಲ್ಲಿ ಡೆತ್​ನೋಟ್ ಪತ್ತೆಯಾಗಿದೆ’ ಎಂದು ಮಾಹಿತಿ ನೀಡಿರುವ ಪೊಲೀಸರು, ಡೆತ್​ನೋಟ್​ನಲ್ಲಿ ಬರೆದಿರುವುದನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಆದರೆ, ‘ಡಾಕ್ಟರ್ ಆಗಲು ಇಷ್ಟವಿಲ್ಲ’ ಎಂದು ಅನುರಾಗ್ ಆ ಡೆತ್​ನೋಟ್​ನಲ್ಲಿ ಬರೆದಿಟ್ಟಿದ್ದ ಎನ್ನುವುದು ಮೂಲಗಳಿಂದ ತಿಳಿದುಬಂದಿದೆ.