ಬೆಂಗಳೂರು: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ದೂರವಾಣಿ ಕರೆ ಮಾಡಿ ಕಿರುಕುಳ ಕೊಡುತ್ತಿದ್ದ ಈರುಳ್ಳಿ ಮಂಡಿ ರೈಟರ್‌ನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ತಮಿಳುನಾಡು ಮೂಲದ ಉಮಾಪತಿ(48)ಕೊಲೆಯಾದ ವ್ಯಕ್ತಿ.ಆರ್‌ಎಂಸಿ ಯಾರ್ಡ್ ಪೊಲೀಸರು, ನಂದಿನಿ ಲೇಔಟ್ ಬುದ್ದನಗರ ನಿವಾಸಿಗಳಾದ ಪಾಪಮ್ಮ (50) ಮತ್ತು ನರಸಿಂಹಯ್ಯ (27) ಎಂಬುವರನ್ನು ಬಂಧಿಸಿದ್ದಾರೆ. ಮತ್ತಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಂದಿನಿಲೇಔಟ್‌ನಲ್ಲಿ ಉಮಾಪತಿ ವಾಸವಾಗಿದ್ದು, ಕುಟುಂಬಸ್ಥರು ತಮಿಳುನಾಡಿನಲ್ಲಿ ನೆಲೆಸಿದ್ದಾರೆ. ಆರ್‌ಎಂಸಿ ಯಾರ್ಡ್‌ನಲ್ಲಿ ಈರುಳ್ಳಿ ಮಂಡಿಯಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದ. ಇದರ ನಡುವೆ ಪಾಪಮ್ಮ ದೂರದ ಸಂಬಂಧಿ ಮಹಿಳೆಯೊಂದಿಗೆ ಉಮಾಪತಿ ಅಕ್ರಮ ಸಂಬಂಧ ಹೊಂದಿದ್ದ. ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಇದ್ದ ಕಾರಣಕ್ಕೆ ಉಮಾಪತಿಯಿಂದ 2 ವರ್ಷಗಳಿಂದ ದೂರವಾಗಿದ್ದಳು.
ಆದರೂ,ಆಕೆಯ ಮನೆ ಬಳಿಗೆ ಹೋಗಿ ಗಲಾಟೆ ಮಾಡುತ್ತಿದ್ದ. ನೊಂದ ಮಹಿಳೆ, ಶಂಕರ್‌ನಗರದಿಂದ ಬುದ್ಧನಗರಕ್ಕೆ ಸ್ಥಳಾಂತರ ಮಾಡಿದ್ದಳು. ಆದರೂ ಆಕೆಗೆ ಕಿರುಕಿಳ ಕೊಡುತ್ತಿದ್ದ. ಮೊಬೈಲ್ಗೆ ಕರೆ ಮಾಡಿ ನೀನು ನನ್ನ ಜೊತೆಗೆ ಸಹಕರಿಸದಿದ್ದರೆ ನನ್ನ ಬಳಿ ಇರುವ ನಮ್ಮಿಬ್ಬರ ಖಾಸಗಿ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸುತ್ತಿದ್ದ.
ಇದನ್ನೂ ಓದಿ: ನಿಯಮ ಉಲ್ಲಂಘಿಸುವ ವಾಹನ ಸವಾರರೇ ಹುಷಾರ್; ಚುನಾವಣೆ ಬಳಿಕ ಮನೆಗೆ ಬಂದು ದಂಡ ಸಂಗ್ರಹಿಸಲಿದ್ದಾರೆ ಪೊಲೀಸರು!
ಆಗಾಗ್ಗೆ ಆ ಮಹಿಳೆ ಮನೆ ಬಳಿ ಹೋಗಿ ಗಲಾಟೆ ಸಹ ಮಾಡುತ್ತಿದ್ದ. ಭಾನುವಾರ ದೂರವಾಣಿ ಕರೆ ಮಾಡಿ ನಿಂದಿಸಿದ್ದ. ನೊಂದ ಮಹಿಳೆ, ತನ್ನ ಸಂಬಂಧಿ ಪಾಪಮ್ಮ ಬಳಿ ಅಳಲು ತೋಡಿಕೊಂಡಿದ್ದಳು. ಪಾಪಮ್ಮ ತನ್ನ ಅಣ್ಣನ ಮಗ ನರಸಿಂಹಯ್ಯ ಬಳಿ ವಿಷಯ ಪ್ರಸ್ತಾಪಿಸಿದ್ದಳು. ಉಮಾಪತಿಗೆ ಸರಿಯಾಗಿ ಬುದ್ದಿ ಕಲಿಸಬೇಕೆಂದು ಮನವಿ ಮಾಡಿದ್ದಳು. ಕೆರಳಿದ ನರಸಿಂಹಯ್ಯ ತನ್ನ ಸಹಚರರ ಜತೆ ಸೇರಿಕೊಂಡು ಭಾನುವಾರ ಸಂಜೆ ಆರ್‌ಎಂಸಿ ಯಾರ್ಡ್ 2ನೇ ಮುಖ್ಯರಸ್ತೆಯ ಈರುಳ್ಳಿ ಅಂಗಡಿ ಬಳಿಗೆ ಹೋಗಿದ್ದಾರೆ. ಅಂಗಡಿಯಲ್ಲಿ ಕುಳಿತಿದ್ದ ಉಮಾಪತಿಯನ್ನು ಪ್ರಶ್ನಿಸಿ ಜಗಳ ತೆಗೆದು ಚಾಕುವಿನಿಂದ ಹೊಟ್ಟೆ ಮತ್ತು ಎದೆಗೆ ಇರಿದು ಅಲ್ಲಿಂದ ಪರಾರಿ ಆಗಿದ್ದರು.
ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಉಮಾಪತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ವಿಷಯ ತಿಳಿದ ಆರ್‌ಎಂಸಿ ಯಾರ್ಡ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.