ಹೈದರಾಬಾದ್: ಕರೊನಾ ವೈರಸ್ ವಿದೇಶಗಳಿಂದ ಭಾರತಕ್ಕೆ ಬಂದಿರುವ ಹಿನ್ನೆಲೆ ಜನರು ಬೇರೆ ದೇಶಗಳಿಂದ ಬಂದಿರುವವರನ್ನು ವೈರಿಗಳಂತೆ ನೋಡಲಾರಂಭಿಸಿದ್ದಾರೆ. ತಮ್ಮ ಅಪಾರ್ಟ್ಮೆಂಟ್ನಲ್ಲಿರುವ ವ್ಯಕ್ತಿಯೊಬ್ಬ ವಿದೇಶದಿಂದ ಬಂದಿದ್ದಾನೆಂಬ ಕಾರಣಕ್ಕೆ ಆತನನ್ನು ಮನೆಯಲ್ಲೇ ಕೂಡಿ ಹಾಕಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಹೈದರಾಬಾದ್ನ ಅಪಾರ್ಟ್ಮೆಂಟ್ ಒಂದರ ನಿವಾಸಿಯಾಗಿರುವ ವ್ಯಕ್ತಿ ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಪ್ರವಾಸ ಮುಗಿಸಿ ಬಂದಿದ್ದ. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಸಲಹೆಯಂತೆ ಆತ 14 ದಿನಗಳ ಕಾಲ ಮನೆಯಲ್ಲಿಯೇ ಇರುವ ನಿರ್ಧಾರ ಮಾಡಿದ್ದು ಅಪಾರ್ಟ್ಮೆಂಟ್ನಲ್ಲೇ ತಂಗಿದ್ದ. ಈ ಮಧ್ಯೆ ನೆರೆ ಮನೆಯವನೊಂದಿಗೆ ಆತನಿಗೆ ಜಗಳವಾಗಿದೆ. ಈ ವ್ಯಕ್ತಿ ಪ್ರತ್ಯೇಕವಾಗಿರಬೇಕಾದ ಸಮಯದಲ್ಲಿ ಹೊರಗೆ ಹೋಗುವ ಯೋಚನೆ ನಡೆಸುತ್ತಿದ್ದಾನೆ ಎಂದು ಊಹಿಸಿದ ನೆರೆ ಮನೆಯಾತ ಈತನೊಂದಿಗೆ ಜಗಳ ಆಡಿದ್ದಾನೆ. ಅದೇ ಕಾರಣದಿಂದಾಗಿ ಆತ ಅಪಾರ್ಟ್ಮೆಂಟ್ನೊಳಗೆ ಇದ್ದಾಗಲೇ ಹೊರಗಿನಿಂದ ಚಿಲಕ ಹಾಕಿದ್ದಾನೆ.
ಹೊರಗಿನಿಂದ ಚಿಲಕ ಹಾಕಲಾಗಿದೆ ಎಂದು ತಿಳಿದ ತಕ್ಷಣ ಪ್ರತ್ಯೇಕ ವಾಸದಲ್ಲಿರುವ ವ್ಯಕ್ತಿ ಪೊಲೀಸರಿಗೆ ಕರೆ ಮಾಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಈ ರೀತಿಯಲ್ಲಿ ನಡೆದುಕೊಳ್ಳಬೇಡಿ ಎಂದು ನೆರೆಹೊರೆಯವರಿಗೆ ಎಚ್ಚರಿಸಿ ಹೋಗಿದ್ದಾರೆ.
ರಾಜ್ಯದಲ್ಲಿ ವಿದೇಶದಿಂದ ಬಂದವರಿಗೆ 14 ದಿನಗಳ ಕಾಲ ಪ್ರತ್ಯೇಕವಾಗಿರಬೇಕು ಎಂದು ಸೂಚಿಸಲಾಗಿದ್ದರೂ ಅನೇಕರು ಆ ನಿಯಮವನ್ನು ಪಾಲಿಸುತ್ತಿಲ್ಲ. ಹಾಗಾಗಿ ತೆಲಂಗಾಣ ಪೊಲೀಸರು, ವೈದ್ಯರು ಮತ್ತು ಗ್ರಾಮ ಪಂಚಾಯಿತಿ ಮತ್ತು ವಾರ್ಡ್ನ ಸದಸ್ಯರನ್ನೊಳಗೊಂಡ ತಂಡವು ವಿದೇಶದಿಂದ ಬಂದಿರುವವರ ಮನೆಗಳಿಗೆ ತೆರಳಿ ಅವರು ನಿಯಮವನ್ನು ಪಾಲನೆ ಮಾಡುತ್ತಿದ್ದಾರಾ ಎನ್ನುವುದರ ಪರಿಶೀಲನೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)