ಆಂಧ್ರಪ್ರದೇಶ: ಕೇಬಲ್ ಸರಿಪಡಿಸುವ ನೆಪದಲ್ಲಿ ಮಹಿಳೆಯೊಬ್ಬರು ಒಂಟಿಯಾಗಿದ್ದ ಸಮಯ ನೋಡಿ ಮನೆಯೊಳಗೆ ಎಂಟ್ರಿ ಕೊಟ್ಟ ದುಷ್ಕರ್ಮಿ, ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ್ದಾನೆ. ಆದ್ರೆ, ಇದು ವಿಫಲವಾಗಲಿದೆ ಎಂದು ಚಿಂತಿಸಿ, ಆಕೆಯ ಕತ್ತು ಹಿಸುಕಿದ ದೃಶ್ಯ ಮನೆಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೋಫಾ ಮೇಲೆ ಕುಳಿತಿದ್ದ ಮಹಿಳೆಯ ಬಳಿ ಹಿಂಬದಿಯಿಂದ ಬಂದ ಕಿಡಿಗೇಡಿ, ಟವೆಲ್ನಿಂದ ಸುತ್ತಿ ಆಕೆಯ ಕತ್ತು ಹಿಸುಕಿ ಹತ್ಯೆಗೈಯಲು ಪ್ರಯತ್ನ ಮಾಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ಆಗಾಗ್ಗೆ ಮನೆಗೆ ಭೇಟಿ ನೀಡುತ್ತಿದ್ದ ಕೇಬಲ್ ಆಪರೇಟರ್ ಮಹಿಳೆಯ ಚಿನ್ನದ ಸರವನ್ನು ಕದಿಯಲು ಹೊಂಚು ಹಾಕಿ, ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದಾರೆ.
ಜನವರಿ 26ರ ಸಂಜೆ 7:30ರ ಸುಮಾರಿಗೆ ಆಂಧ್ರಪ್ರದೇಶದ ಗವರಪಾಲೆಂನಲ್ಲಿ ಈ ಘಟನೆ ಸಂಭವಿಸಿದೆ. ದಾಳಿಯ ಬೆನ್ನಲ್ಲೇ ಕುಟುಂಬದವರು ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 307 (ಕೊಲೆ ಯತ್ನ) ಮತ್ತು 394 (ಸ್ವಯಂಪ್ರೇರಿತವಾಗಿ ದರೋಡೆ ಮಾಡುವಲ್ಲಿ ಗಾಯಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ,(ಏಜೆನ್ಸೀಸ್).