ಮುಂಬೈ: ಮಸ್ಕತ್-ಢಾಕಾ ವಿಮಾನದಲ್ಲಿ ಮಹಿಳಾ ಅಟೆಂಡೆಂಟ್ ಅನ್ನು ತಬ್ಬಿಕೊಂಡು, ಚುಂಬಿಸಲು ಯತ್ನಿಸಿದ ಬಾಂಗ್ಲಾದೇಶ ಮೂಲದ ವ್ಯಕ್ತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಜಿ20 ಶೃಂಗಸಭೆ: ಅಮೆರಿಕ ಅಧ್ಯಕ್ಷರು ಮತ್ತು ಇತರ ರಾಷ್ಟ್ರಗಳ ಮುಖ್ಯಸ್ಥರು ದೆಹಲಿಯಲ್ಲಿ ಎಲ್ಲಿ ತಂಗಲಿದ್ದಾರೆ ಗೊತ್ತಾ?
ಮಸ್ಕತ್-ಢಾಕಾ ವಿಮಾನದಲ್ಲಿ ಮಹಿಳಾ ಫ್ಲೈಟ್ ಅಟೆಂಡೆಂಟ್‌ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 30 ವರ್ಷದ ಬಾಂಗ್ಲಾದೇಶದ ಪ್ರಜೆಯನ್ನು ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ವಿವರ: ಗುರುವಾರ (ಸೆಪ್ಟಂಬರ್ 07) ಮುಂಜಾನೆ ಈ ಘಟನೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಸ್ತಾರ ವಿಮಾನವು ಲ್ಯಾಂಡಿಂಗ್ ಆಗುವ ಕೆಲ ಸಮಯಗಳ ಹಿಂದೆ ಸಂಭವಿಸಿದೆ ಎಂದು ಹೇಳಲಾಗಿದೆ. ಆರೋಪಿಯನ್ನು ಬಾಂಗ್ಲಾದೇಶದ ಮೊಹಮ್ಮದ್ ದುಲಾಲ್ ಎಂದು ಗುರುತಿಸಲಾಗಿದ್ದು, ಮಸ್ಕತ್‌ನಿಂದ ಮುಂಬೈ ಮೂಲಕ ಢಾಕಾಗೆ ಪ್ರಯಾಣಿಸುತ್ತಿದ್ದ ಎಂದು ವರದಿ ತಿಳಿಸಿದೆ.
"ವಿಮಾನದಲ್ಲಿ ಆರೋಪಿ ದುಲಾಲ್ ತನ್ನ ಸೀಟಿನಿಂದ ಎದ್ದು ಮಹಿಳೆಯನ್ನು ಅಪ್ಪಿಕೊಂಡು, ಚುಂಬಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಇತರ ವಿಮಾನ ಸಿಬ್ಬಂದಿ ಆತನಿಗೆ ಎಚ್ಚರಿಕೆ ನೀಡಿದ್ದಾರೆ. ಮುಂಬೈ ಏರ್ಪೋರ್ಟ್ಗೆ ಬಂದಿಳಿದ ಕೂಡಲೇ ವ್ಯಕ್ತಿಯನ್ನು ಭದ್ರತಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ತದನಂತರ ಸಹರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ವಿಮಾನ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಶುಕ್ರವಾರದವರೆಗೆ ಪೊಲೀಸ್ ಕಸ್ಟಡಿಗೆ ಒಳಪಡಿಸಲಾಗಿದೆ" ಎಂದು ಅಧಿಕಾರಿಗಳು ಹೇಳಿದ್ದಾರೆ,(ಏಜೆನ್ಸೀಸ್).