ತಿರುವನಂತಪುರಂ: ಪ್ರೀತಿಯಿಂದ ಸಾಕಿದ ನಾಯಿಯನ್ನು ಹೇಗೆ ನೋಡಿಕೊಳ್ಳಬೇಕು? ತಮ್ಮ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ನಾಯಿಯನ್ನು ಸಾಕುವವರೂ ಇದ್ದಾರೆ. ಆದರೆ ಇಲ್ಲೊಬ್ಬ ದುಷ್ಟ ತಾನು ಪ್ರೀತಿಯಿಂದ ಸಾಕಿದ್ದ ನಾಯಿಯನ್ನ ತನ್ನ ಕಾರಿನ ಹಿಂದೆ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದಾನೆ. ಅದಕ್ಕೊಂದು ಕಾರಣವನ್ನೂ ಆತ ಕೊಟ್ಟಿದ್ದಾನೆ.
ಕೇರಳದ ಎರ್ನಾಕುಲಂ ಜಿಲ್ಲೆಯ ಅತ್ತಾಣಿ ಬಳಿ ವಾಸವಿರುವ ಯೂಸುಫ್ ಇಂತಹ ದುಷ್ಕೃತ್ಯ ಎಸಗಿರುವ ಮನುಷ್ಯ. ಈತ ಕಾರಿನ ಚಾಲಕನಾಗಿ ಕೆಲಸ ಮಾಡುತ್ತಾನೆ. ಇತ್ತೀಚೆಗೆ ತಾನು ಸಾಕಿದ್ದ ನಾಯಿಯ ಕುತ್ತಿಗೆಗೆ ಹಗ್ಗ ಕಟ್ಟಿದ ಯೂಸುಫ್ ಅದನ್ನು ತನ್ನ ಕಾರಿನ ಹಿಂದೆ ಕಟ್ಟಿದ್ದಾನೆ. ನಂತರ ಗಾಡಿ ಸ್ಟಾರ್ಟ್ ಮಾಡಿ ಓಡಿಸಿಕೊಂಡು ಹೋಗಿದ್ದಾನೆ. ಗಾಡಿಯ ಹಿಂದಿದ್ದ ನಾಯಿ ನರಳುತ್ತ ಗಾಡಿ ಹಿಂದೆ ಕಾಲೆಳೆದುಕೊಂಡು ಹೋಗಿದೆ.
ನನಗೆ ನಾಯಿ ಎಂದರೆ ಇಷ್ಟ. ಅದಕ್ಕೆಂದೇ ಈ ನಾಯಿಯನ್ನು ತಂದು ಸಾಕಿದ್ದೆ. ಆದರೆ ನಮ್ಮ ಮನೆಯವರಿಗೆ ನಾಯಿಯನ್ನು ಕಂಡರೆ ಆಗುತ್ತಿರಲಿಲ್ಲ. ಈ ನಾಯಿಯನ್ನು ಎಲ್ಲಾದರೂ ಬಿಟ್ಟು ಬರುವಂತೆ ಹೇಳಿದರು. ಕಾರಿನ ಒಳಗೆ ನಾಯಿಯನ್ನು ಸೇರಿಸಬೇಡ ಎಂದೂ ಹೇಳಿದರು. ಅದಕ್ಕೆಂದು ನಾನು ನಾಯಿಯನ್ನು ಕಾರಿನ ಹಿಂದೆ ಕಟ್ಟಿ ಎಳೆದೊಯ್ದೆ ಎಂದು ಯೂಸುಫ್ ತಪ್ಪೊಪ್ಪಿಕೊಂಡಿದ್ದಾನೆ. (ಏಜೆನ್ಸೀಸ್)