ನ್ಯೂಸ್

ಸ್ಯಾನಿಟೈಸರ್ ಕದಿಯಲು ದೊಡ್ಡ ಬ್ಯಾಂಕ್​​ಗೇ ನುಗ್ಗಿದ ಭೂಪ...!

ವಾಷಿಂಗ್ಟನ್: ಕರೊನಾವೈರಸ್ ಪ್ರಕರಣಗಳು ದಿನೆ ದಿನೆ ಹೆಚ್ಚುತ್ತಿದ್ದು, ಈ ವಿಷಮ ಸ್ಥಿತಿಯಲ್ಲಿ ಹ್ಯಾಂಡ್ ಸ್ಯಾನಿಟೈಸರ್​​ಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ನಕಲಿ ಉತ್ಪನ್ನಗಳೂ ಎಗ್ಗಿಲ್ಲದೆ ಮಾರುಕಟ್ಟೆಗೆ ನುಗ್ಗುತ್ತಿವೆ.

ವಿಲಕ್ಷಣ ಘಟನೆಯೊಂದರಲ್ಲಿ, ಅಮೆರಿಕದ ವ್ಯಕ್ತಿಯೊಬ್ಬ ಬ್ಯಾಂಕ್​​​ವೊಂದಕ್ಕೆ ನುಗ್ಗಿ ಹ್ಯಾಂಡ್ ಸ್ಯಾನಿಟೈಸರ್ ಕದ್ದಿದ್ದಾನೆ. ಒಂದೇ ರಾತ್ರಿ ಆತ ಮೂರು ಕಟ್ಟಡಗಳಿಗೆ ನುಗ್ಗಿದ್ದು, ಸರಣಿಗಳ್ಳತನದ ಆರೋಪದ ಮೇಲೆ ಆತನನ್ನು ಪೊಲೀಸರು ಸ್ಥಳೀಯ ಜೈಲಿಗಟ್ಟಿದ್ದಾರೆ.

ಆತನ ಹೆಸರು ಮಾರ್ಕ್ ಗ್ರೇ. ವಯಸ್ಸು39 ವರ್ಷ.

ಗ್ರೇ ಮಂಗಳವಾರ ಮಧ್ಯರಾತ್ರಿ ಪಿಯರ್ಸ್ ಸ್ಟ್ರೀಟ್‌ನ ಸೆಕ್ಯುರಿಟಿ ನ್ಯಾಷನಲ್ ಬ್ಯಾಂಕ್​​ಗೆ ನುಗ್ಗಿ ಗಾಜಿನ ಬಾಗಿಲನ್ನು ಒಡೆದು, ಹ್ಯಾಂಡ್ ಸ್ಯಾನಿಟೈಸರ್ ಕದ್ದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಬೆಳಗ್ಗೆ 1: 45 ಕ್ಕೆ ಆತ ನೆಬ್ರಸ್ಕಾ ಸ್ಟ್ರೀಟ್‌ನಲ್ಲಿರುವ ಕೌನ್ಸೆಲಿಂಗ್ ಕೇಂದ್ರದ ಗಾಜಿನ ಬಾಗಿಲನ್ನು ಒಡೆದು ಹಣ ಹುಡುಕಿದ್ದಾನೆ. ಆದರೆ ಅಲ್ಲಿ ಕಳ್ಳತನವಾದ ಬಗ್ಗೆ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಿಗ್ಗೆ 5: 45 ಕ್ಕೆ ಗ್ರೇ ಇಟಾಲಿಯನ್ ರೆಸ್ಟೋರೆಂಟ್‌ಗೆ ನುಗ್ಗಿದ್ದ. ನಗರ ಪೊಲೀಸರು ಅವನನ್ನು ಉಪಾಹಾರ ಗೃಹದಲ್ಲಿ ಕಂಡು ಬಂಧಿಸಿದ್ದಾರೆ.