ನ್ಯೂಸ್

ಬ್ರೆಜಿಲ್​ ಅಧ್ಯಕ್ಷನ ವಿಡಿಯೋ ಕಾನ್ಫರೆನ್ಸ್​ನಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡ ಉದ್ಯಮಿ...

ಬ್ರೆಜಿಲ್ ಅಧ್ಯಕ್ಷ ಜೇರ್​ ಜೈರ್ ಬೋಲ್ಸನಾರೊ ಅವರು ಈಗೆರಡು ದಿನಗಳ ಹಿಂದೆ ಕೊವಿಡ್​-19 ಲಾಕ್​ಡೌನ್​ ಪರಿಣಾಮ, ಮುಂದಿನ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಲು ಪ್ರಮುಖ ಅಧಿಕಾರಿಗಳು, ಸಚಿವರುಗಳು, ಉದ್ಯಮಿಗಳೊಂದಿಗೆ ವಿಡಿಯೋ ಕಾಲ್​ ಮೂಲಕ ಸಭೆ ಹಮ್ಮಿಕೊಂಡಿದ್ದರು. ಆದರೆ ಈ ಸಭೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ...!

ವಿಡಿಯೋ ಕಾಲ್​ನಲ್ಲಿ ಸಭೆ ನಡೆಯುತ್ತಿತ್ತು, ಈ ಮಧ್ಯೆ ಉದ್ಯಮಿಯೋರ್ವ ಬೆತ್ತಲೆಯಾಗಿ ಕಾಣಿಸಿಕೊಂಡು, ಉಳಿದವರಿಗೂ ತೀವ್ರ ಮುಜುಗರ ಉಂಟು ಮಾಡಿದರು.

ಸಾವೋ ಪಾಲೋದ ಕೈಗಾರಿಕೆಗಳ ಒಕ್ಕೂಟದ ಅಧ್ಯಕ್ಷ ಪೌಲೋ ಸ್ಕಾಫ್​ ಹೀಗೆ ಎಡವಟ್ಟು ಮಾಡಿದವರು. ಈ ಉದ್ಯಮಿ ಕ್ಯಾಮರಾ ಆಫ್ ಮಾಡಲು ಮರೆತು ಸ್ನಾನಕ್ಕೆ ಇಳಿದಿದ್ದೇ ಅವಾಂತರಕ್ಕೆ ಕಾರಣವಾಯ್ತು. ಪೌಲೋ ಸ್ಕಾಫ್​ ಬೆತ್ತಲೆ ದೇಹ ವಿಡಿಯೋ ಕಾಲ್​​ನಲ್ಲಿ ಕಾಣಿಸುತ್ತಿದ್ದಂತೆ ತೀವ್ರ ಸಿಟ್ಟಾದ ಅಧ್ಯಕ್ಷ ಬೋಲ್ಸನಾರೊ, ಸ್ಥಳದಲ್ಲಿದ್ದ ಕೈಗಾರಿಕಾ ಸಚಿವ ಪೌಲೋ ಗುಡೆಸ್​ ಬಳಿ ಈ ಬಗ್ಗೆ ಪ್ರಶ್ನಿಸಿದರು. ಈ ಉದ್ಯಮಿಯೊಂದಿಗೆ ಆಗಲೇ ಚರ್ಚೆ ನಡೆದಿತ್ತಲ್ಲ. ನಮ್ಮೊಂದಿಗೆ ವಿಡಿಯೋ ಕಾಲ್​ನಲ್ಲಿ ಇದ್ದರಲ್ಲ. ಈಗ ನೋಡಿದರೆ ಹೀಗೆ ಬೆತ್ತಲೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಸರಿ ಇದ್ದಾರಾ? ಏನಾದರೂ ಸಮಸ್ಯೆಯಾಗಿದೆಯಾ? ಎಂದು ಪ್ರಶ್ನಿಸಿದ್ದಾರೆ.

ಬಹುಶಃ ಅಧ್ಯಕ್ಷರೊಂದಿಗೆ ನಡೆದ ಚರ್ಚೆ ತುಂಬ ಹಾಟ್​ ಆಗಿತ್ತು ಅನ್ನಿಸುತ್ತದೆ. ಹಾಗಾಗಿ ಮನೆಯಲ್ಲಿ ಒಬ್ಬನೇ ಬೆತ್ತಲೆಯಾಗಿ ತಣ್ಣನೆ ನೀರಲ್ಲಿ ಸ್ನಾನ ಮಾಡುತ್ತಿದ್ದಾನೆ..ಗ್ರೇಟ್​ ಎಂದು ಕೈಗಾರಿಕಾ ಸಚಿವ ಗುಡೆಸ್​ ಉತ್ತರಿಸಿದ್ದಾರೆ. ಆದರೂ ಈ ಸನ್ನಿವೇಶ ತುಂಬ ಮುಜುಗರ ಸೃಷ್ಟಿಸಿತು.

ಆದರೆ ವಿಡಿಯೋ ಕಾಲ್​ ಸ್ಕ್ರೀನ್​ನಲ್ಲಿ ಕಾಣಿಸಿಕೊಂಡ ಈ ದೃಶ್ಯದ ಸ್ಕ್ರೀನ್​ಶಾಟ್​ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿವೆ.

ಲಾಕ್​ಡೌನ್​ನಿಂದಾಗಿ ಹಲವು ದೇಶಗಳಲ್ಲಿ ಎಲ್ಲರೂ ಬಹುತೇಕ ವರ್ಕ್​ ಫ್ರಾಂ ಹೋಂನಲ್ಲಿದ್ದಾರೆ. ಅಂದಿನಿಂದಲೂ ಇಂತಹ ವಿಚಿತ್ರ ಸನ್ನಿವೇಶಗಳು ನಡೆಯುತ್ತಲೇ ಇವೆ. (ಏಜೆನ್ಸೀಸ್​)