ಸೂರತ್: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸೂರತ್‌ನ ವ್ಯಕ್ತಿಯೊಬ್ಬ ತನ್ನ ಮಗಳಿಗೆ 25 ಬಾರಿ ಇರಿದು ಕೊಂದಿರುವ ಘಟನೆ ನಡೆದಿದೆ. ಇಡೀ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಘೋರ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಮಾನುಜ (45) ಬಂಧಿತ. ಪ್ರಕರಣ ಸಂಬಂಧ ಈತನ ಪತ್ನಿ ರೇಖಾ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಘಟನೆ ನಡೆದು 2 ದಿನಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಡೆದಿದ್ದೇನು?: ರಾಮಾನುಜ ಅವರದ್ದು ಸುಂದರವಾದ ಕುಟುಂಬವಾಗಿದೆ. ಈ ಕುಟುಂಬ ಸೂರತ್‌ನ ಸತ್ಯ ನಗರ ಸೊಸೈಟಿಯಲ್ಲಿ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿತ್ತು. ಒಂದು ದಿನ ರಾಮಾನುಜ ಅವರ ಮಗಳು ಟೆರೇಸ್ ಮೇಲೆ ಮಲಗಿದ್ದಳು. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಮಾನುಜ ಪತ್ನಿಯೊಂದಿಗೆ ಜಗಳವಾಡಿದ್ದಾನೆ.
ಈ ಸಣ್ಣ ಜಗಳದಲ್ಲಿ ತಾಳ್ಮೆ ಕಳೆದುಕೊಂಡ ರಾಮಾನುಜ ಸರಿಸುಮಾರು ರಾತ್ರಿ 11.20 ಕ್ಕೆ, ತನ್ನ ಮಕ್ಕಳ ಮುಂದೆ ತನ್ನ ಹೆಂಡತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ತಾಯಿ ಗಾಯಗೊಂಡಿರುವುದನ್ನು ನೋಡಿದ ಮಗಳು ಅಪ್ಪನಿಂದ ತಾಯಿಯನ್ನು ಕಾಪಾಡಲು ಹೋಗಿದ್ದಾರೆ. ಸಿಟ್ಟಿನಲ್ಲಿದ್ದ ರಾಮಾನುಜನ ಕೈಗೆ ಮಗಳು ಸಿಕ್ಕಿದ್ದಾಳೆ. ಮಗಳನ್ನು ಗೋಡೆಗೆ ತಳ್ಳಿ 25ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದಿದ್ದಾನೆ.
ತನ್ನ ಜೀವವನ್ನು ಉಳಿಸಿಕೊಳ್ಳಲು ತಂದೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ, ಪಕ್ಕದಲ್ಲಿದ್ದ ಕೋಣೆಯೊಳಗೆ ಆಕೆ ನುಗ್ಗಿದಳು. ಅವಳನ್ನು ಹಿಂಬಾಲಿಸಿದ ರಾಮಾನುಜ ಚಾಕುವಿನಿಂದ ಮತ್ತೆ ಚುಚ್ಚಿದ್ದಾನೆ.
ಈ ಬಗ್ಗೆ ಸೂರತ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ರಾಮಾನುಜನನ್ನು ಬಂಧಿಸಿದರು. ಕೊಲೆಗೆ ಬಳಸಿದ್ದ ಆಯುಧವನ್ನೂ ವಶಪಡಿಸಿಕೊಂಡಿದ್ದಾರೆ.
'ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಆತನ ವಿರುದ್ಧ ಕೊಲೆ ಮತ್ತು ಕೊಲೆ ಯತ್ನ ಸೇರಿದಂತೆ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕುಟುಂಬಸ್ಥರ ಹೇಳಿಕೆಯನ್ನು ಪಡೆದಿದ್ದೇವೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.