ನ್ಯೂಸ್

ಚಾಕುವಿನಿಂದ ಇರಿದು ವ್ಯಕ್ತಿ ಹತ್ಯೆ

ಮಂಜುನಾಥ.ಕೆ

ಬೆಂಗಳೂರು: ನಡೆದು ಬರುತ್ತಿದ್ದ ವ್ಯಕ್ತಿಯೊಬ್ಬನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಪ್ರಕರಣ ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದ ಬಳಿ ಶನಿವಾರ ರಾತ್ರಿ ನಡೆದಿದೆ.


ಮೇಡಹಳ್ಳಿ ನಿವಾಸಿ ರಫೀಕ್ ಅಹಮದ್ ಅಲಿಯಾಸ್ ತಾರೀಖ್(೨೮) ಹತ್ಯೆಯಾದವರು. ಶನಿವಾರ ರಾತ್ರಿ ೮.೩೦ರ ಸುಮಾರಿಗೆ ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದ ಬಳಿ ದುಷ್ಕರ್ಮಿಗಳು ರಫೀಕ್ ಅಹಮದ್‌ಗೆ ಮನಬಂದಂತೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ರಫೀಕ್‌ನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷೆ ಮಾಡಿದ ವೈದ್ಯರು ರಫೀಕ್ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.


ಹತ್ಯೆಯಾದ ರಫೀಕ್ ಗುಜರಿ ವಸ್ತುಗಳ ಡೀಲರ್ ಆಗಿದ್ದ. ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹುಡುಗಿ ವಿಚಾರ ಅಥವಾ ಹಣಕಾಸು ವಿಚಾರವಾಗಿ ಈ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ರಫೀಕ್‌ನ ಬಾಲ್ಯ ಸ್ನೇಹಿತನೇ ಈ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಂಕೆ ವ್ಯಕ್ತವಾಗಿದೆ.
ಹತ್ಯೆ ವಿಚಾರ ತಿಳಿದು ವೈಟ್‌ಫೀಲ್ಡ್ ಡಿಸಿಪಿ ಸಂಜೀವ್ ಪಾಟೀಲ್ ಸೇರಿ ಮಹದೇಪುರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.