ಸಾಂದರ್ಭಿಕ ಚಿತ್ರ 
ನ್ಯೂಸ್

ಸಿಗರೇಟ್ ಸೇದಬೇಡ ಎಂದಿದ್ದಕ್ಕೆ ಕತ್ತರಿಯಿಂದ 9 ಬಾರಿ ಇರಿದ ಯುವಕ

ದೆಹಲಿ: ಸಿಗರೇಟ್ ಸೇದಬೇಡಿ ಎಂದು ಕೇಳಿದ್ದಕ್ಕೆ ಅಮಲಿನಲ್ಲಿದ್ದ ಯುವಕ, 38 ವರ್ಷದ ವ್ಯಕ್ತಿಯೊಬ್ಬನಿಗೆ ಕತ್ತರಿಯಿಂದ ಹಲವು ಬಾರಿ ಇರಿದಿರುವ ಘಟನೆ ನೈಋತ್ಯ ದೆಹಲಿಯ ಕಿಶನ್‌ಗಢದಲ್ಲಿ ನಡೆದಿದೆ.

ಘಟನೆಯಲ್ಲಿ ಅಭಯ್​ ಕುಮಾರ(38) ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಮೋಹಿತ್ ಮಹ್ಲಾವತ್(22) ಎಂಬಾತನೇ ಕತ್ತರಿಯಿಂದ ಇರಿದ ಆರೋಪಿ.
ಭಾನುವಾರದಂದು ಮೋಹಿತ್ ಕ್ಷೌರ ಮಾಡಿಸಿಕೊಳ್ಳಲೆಂದು ಅಭಯ್​ನ ಕ್ಷೌರಿಕನ ಅಂಗಡಿಗೆ ಬಂದಿದ್ದ. ಈ ವೇಳೆ ಅಭಯ್ ಕ್ಷೌರ ಮಾಡಲು ಬೇರೆಡೆ ಹೋಗಿದ್ದನು. ಸ್ವಲ್ಪ ಸಮಯದ ನಂತರ ಅಂಗಡಿಗೆ ವಾಪಸ್ಸು ಬಂದು ನೋಡಿದಾಗ ಮೋಹಿತ್​ ಅಂಗಡಿಯಲ್ಲಿ ಧೂಮಪಾನ ಮಾಡುತ್ತಿದ್ದ.

ಈ ವೇಳೆ ಅಭಯ್​, ಮೋಹಿತ್​ನಿಗೆ ಅಂಗಡಿಯಲ್ಲಿ ಸಿಗರೇಟ್​ ಸೇದಬೇಡ, ಹೊರಗಡೆ ಹೋಗಿ ಧೂಮಪಾನ ಮಾಡುವಂತೆ ಹೇಳಿದ್ದ. ಆದರೆ ಅಮಲಿನಲ್ಲಿದ್ದ ಮೋಹಿತ್​ ಈ ಮಾತನ್ನು ತಿರಸ್ಕರಿಸಿದ್ದಾನೆ. ಕೊನೆಗೆ ಇಬ್ಬರ ನಡುವೆ ಜಗಳ ನಡೆದಿದ್ದು, ಮೋಹಿತ್ ​ಕತ್ತರಿಯಿಂದ ಅಭಯ್​ಗೆ ಹಲವು ಬಾರಿ ಇರಿದಿದ್ದಾನೆ.

ಕೂಡಲೇ ಕುಮಾರ್​ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಗಂಬೀರವಾಗಿ ಗಾಯಗೊಂಡಿದ್ದಾನೆ. ಇನ್ನು, ಈತನ ಹೇಳಿಕೆಯನ್ನು ಆಧರಿಸಿ ಮೋಹಿತ್​ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್​)