ನ್ಯೂಸ್

'ಕರೊನಾ ಹರಡುತ್ತಿದ್ದರೂ ತಬ್ಲಿಘಿ ಜಮಾತ್​ ಧಾರ್ಮಿಕ ಸಭೆ ನಡೆಸಿದ್ದು ಎಷ್ಟು ಸರಿ?'- ಟೀ ಅಂಗಡಿ ಬಳಿ ನಿಂತು ಹೀಗೆಂದು ಪ್ರಶ್ನಿಸಿದವನ ಪ್ರಾಣವನ್ನೇ ತೆಗೆದರು...!

ಅಲಹಾಬಾದ್: ಈಗ ಎಲ್ಲೆಲ್ಲೂ ಕರೊನಾ ವೈರಸ್​ ಬಗ್ಗೆಯೇ ಮಾತು. ನಿಜಾಮುದ್ದೀನ್​ ಮರ್ಖಜ್​ನ ಧಾರ್ಮಿಕ ಸಭೆಯ ನಂತರ ಕರೊನಾ ಪ್ರಸರಣದ ಪ್ರಮಾಣ ಮಿತಿಮೀರಿದ್ದರಿಂದ ಬಹುತೇಕರ ಬಾಯಲ್ಲಿ ಸಹಜವಾಗಿ ಅದರ ಚರ್ಚೆ ನಡೆಯುತ್ತಿದೆ. ಆದರೆ ಅದೀಗ ಒಂದು ಹತ್ಯೆಗೆ ಕಾರಣವಾಗಿದ್ದು ಆತಂಕಕಾರಿ ಬೆಳವಣಿಗೆ.

ಪ್ರಯಾಗ್​ರಾಜ್​​ನಲ್ಲಿ ಭಾನುವಾರ ಘಟನೆ ನಡೆದಿದೆ. 23 ವರ್ಷದ ಲೋಟನ್ ನಿಷಾದ್ ಎಂಬ ಯುವಕನನ್ನು ಮತ್ತೋರ್ವ ಯುವಕನ ಗುಂಡು ಹೊಡೆದು ಹತ್ಯೆ ಮಾಡಿದ್ದಾನೆ.

ನಿಷಾದ್​ ಕರೇಲಿಯ ಭಕ್ಷಿ ಗ್ರಾಮದಲ್ಲಿ ಟೀ ಸ್ಟಾಲ್​ವೊಂದರ ಬಳಿ ಕರೊನಾ ವೈರಸ್​ ವಿಚಾರವಾಗಿಯೇ ಮಾತನಾಡುತ್ತಿದ್ದ. ಹಲವು ಜನ ಆತನ ಮಾತನ್ನು ಕೇಳುತ್ತಿದ್ದರು. ಹೀಗೆ ಮಾತನಾಡುತ್ತ ನಿಷಾದ್​ ತಬ್ಲಿಘಿ ಜಮಾತ್​ನ ಧಾರ್ಮಿಕ ಸಭೆಯ ಬಗ್ಗೆಯೂ ಕಾಮೆಂಟ್​ ಮಾಡಿದ. ಕೊವಿಡ್​ -19 ಅಷ್ಟು ದೊಡ್ಡ ಪ್ರಮಾಣದಲ್ಲಿ ಹರಡುತ್ತಿದ್ದರೂ ಸಭೆ ನಡೆಸಿದ್ದು ಸರಿಯಲ್ಲ ಎಂಬರ್ಥದಲ್ಲಿ ಮಾತನಾಡುತ್ತಿದ್ದ. ಅಲ್ಲದೆ ತಬ್ಲಿಘಿ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದ.

ಇದೇ ವೇಳೆ ಅಲ್ಲೇ ರಸ್ತೆಯಲ್ಲಿ ಹೋಗುತ್ತಿದ್ದ ಯುವಕರ ಗುಂಪೊಂದು ಬಂದು ನಿಷಾದ್​ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಅದು ಗಲಾಟೆಗೆ ಕಾರಣವಾಯಿತು. ಪರಿಸ್ಥಿತಿ ಬಿಗಡಾಯಿಸುವುದನ್ನು ನೋಡಿದ ಅಲ್ಲಿಯೇ ಇದ್ದ ಓರ್ವ ಮತ್ತೊಂದಷ್ಟು ಜನರನ್ನು ಕರೆದುಕೊಂಡು ಬರಲು ಹಳ್ಳಿಯೊಳಕ್ಕೆ ಹೋದ. ಆದರೆ ದಾರಿಹೋಕ ಯುವಕರು ಸುಮ್ಮನಾಗದೆ ನಿಷಾದ್​​ಗೆ ಗುಂಡು ಹೊಡೆದಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಪೊಲೀಸರು ಇದನ್ನು ಖಚಿತಪಡಿಸಿದ್ದಾರೆ.

ಗುಂಡಿನ ದಾಳಿ ನಡೆಸಿದವರ ಮೇಲೆ ಗ್ರಾಮಸ್ಥರು ದಾಳಿ ನಡೆಸಿದರು. ಆದರೆ ಓರ್ವ ಮಾತ್ರ ಸಿಕ್ಕಿಬಿದ್ದಿದ್ದಾನೆ. ಉಳಿದವರೆಲ್ಲ ಪರಾರಿಯಾಗಿದ್ದಾರೆ. ನಿಷಾದ್​ನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)