ನ್ಯೂಸ್

42ರ ಗೃಹಿಣಿಗೆ ಗುಂಡಿಟ್ಟು ಪ್ರಾಣಬಿಟ್ಟ 25ರ ಯುವಕ! ಸುಳಿವು ಸಿಕ್ಕರೂ ಕಾರಣ ಮಾತ್ರ ನಿಗೂಢ

ನವದೆಹಲಿ: ಮಹಿಳೆಯೊಬ್ಬಳಿಗೆ ಗುಂಡಿಟ್ಟು ಕೊಂದಿರುವ ಘಟನೆ ನೈಋತ್ಯ ದೆಹಲಿಯ ದಾಬ್ರಿ ಏರಿಯಾದಲ್ಲಿ ಗುರುವಾರ ಸಂಜೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರೇಣು ಗೋಯೆಲ್​ (42) ಕೊಲೆಯಾದ ಮಹಿಳೆ. ಗುರುವಾರ ರಾತ್ರಿ 8.45ರ ಸುಮಾರಿಗೆ ದಾಬ್ರಿ ಪೊಲೀಸ್​ ಠಾಣೆಗೆ ಕೊಲೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿತು. ಕೂಡಲೇ ಸ್ಥಳಕ್ಕೆ ಹೋದಾಗ ರೇಣು ಎಂಬಾಕೆಯನ್ನು ಆಕೆಯ ಮನೆಯಲ್ಲೇ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ರೇಣು ಗೃಹಿಣಿಯಾಗಿದ್ದು, ಆಕೆ ವೈಶಾಲಿ ಕಾಲನಿಯಲ್ಲಿ ಕುಟುಂಬದ ಜತೆ ನೆಲೆಸಿದ್ದಳು ಎಂದು ಡೆಪ್ಯೂಟಿ ಪೊಲೀಸ್​ ಕಮಿಷನರ್​ (ದ್ವಾರಕ) ಎಂ. ಹರ್ಷವರ್ಧನ್​ ತಿಳಿಸಿದ್ದಾರೆ.

ಬಳಿಕ ಪೊಲೀಸ್​ ತಂಡವನ್ನು ರಚಿಸಿ ಆರೋಪಿಯನ್ನು ಹಿಡಿಯುವ ಪ್ರಯತ್ನ ನಡೆದಿತ್ತು. ಆದರೆ, ಆರೋಪಿಯು ಕೂಡ ತನಗೆ ತಾನೇ ಗುಂಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಂಧನಕ್ಕೆಂದು ಪೊಲೀಸರ ತಂಡ ಆರೋಪಿಯ ಮನೆಗೆ ಹೋದಾಗ ಈ ಘಟನೆ ನಡೆದಿದೆ. ಮಹಡಿಯ ಮೇಲೆ ಪಿಸ್ತೂಲ್​ ಸಿಕ್ಕಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ಮೃತ ಆರೋಪಿಯನ್ನು ಆಶಿಶ್​ (25) ಎಂದು ಗುರುತಿಸಲಾಗಿದೆ.

ಇಬ್ಬರು ಸ್ಥಳೀಯ ಜಿಮ್​ನಲ್ಲಿ ಎರಡು ವರ್ಷದ ಹಿಂದೆ ಭೇಟಿಯಾದಾಗ ಇಬ್ಬರು ನಡುವೆ ಸ್ನೇಹ ಬೆಳೆದಿತ್ತು. ಆದರೆ, ರೇಣು ಅವರ ಅತ್ತೆ ಅವರ ಸ್ನೇಹಕ್ಕೆ ಸಮ್ಮತಿಸಿರಲಿಲ್ಲ. ಆಕೆಯ ಗಂಡನಿಗೂ ಇದು ಇಷ್ಟವಿರಲಿಲ್ಲ. ಕೊಲೆಯ ಉದ್ದೇಶವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಮೃತ ಆಶಿಶ್​ ಮನೆಯಲ್ಲೂ ಯಾವುದೇ ಡೆತ್​ನೋಟ್​ ಪತ್ತೆಯಾಗಿಲ್ಲ. ಯಾವುದಾದರೂ ಸುಳಿವು ಸಿಗಬಹುದಾ ಅಂತ ಅಕ್ಕಪಕ್ಕದ ಮನೆಯವರನ್ನು ಪೊಲೀಸರು ವಿಚಾರಿಸುತ್ತಿದ್ದಾರೆ. ಆದರೆ, ಜಿಮ್​ನಲ್ಲಿ ಭೇಟಿಯಾಗಿ ಪರಿಚಯವಾದ ವಿಚಾರ ಬಿಟ್ಟು ಈವರೆಗೂ ಕೊಲೆಗೆ ಕಾರಣ ಏನೆಂಬುದು ತಿಳಿಬಂದಿಲ್ಲ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)