ಹನೂರು/ಕೊಳ್ಳೇಗಾಲ : ಜಮೀನು ಒತ್ತುವರಿ ಸಂಬಂಧ ಹಲ್ಲೆ ನಡೆಸಿ ವ್ಯಕ್ತಿಯೊಬ್ಬನ ಸಾವಿಗೆ ಕಾರಣರಾಗಿದ್ದ ಆರೋಪಿಗೆ ಶನಿವಾರ ಕೊಳ್ಳೇಗಾಲ ಅಪರ ಹಾಗೂ ಸತ್ರ ನ್ಯಾಯಾಲಯ ಜೀವಾವಧಿ ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ಜಿ.ಕೆ. ಹೊಸೂರು ಗ್ರಾಮದ ರವಿ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ. ಅಪರಾಧಿ ರವಿ ಹಾಗೂ ಇದೇ ಗ್ರಾಮದ ಚಿಕ್ಕಮಣಿ ಅವರ ಕುಟುಂಬದವರಿಗೆ ಪಿತ್ರಾರ್ಜಿತವಾಗಿ ಬಂದಂತಹ ಸರ್ವೇ ನಂ.183/ಸಿ ಹಾಗೂ 183/1ರ ಜಮೀನು ಸಂಬಂಧ ಭಾಗಾಂಶದ ವಿಚಾರದಲ್ಲಿ ವೈಮನಸ್ಸು ಉಂಟಾಗಿತ್ತು. ಈ ಬಗ್ಗೆ ಸರ್ವೇ ನಡೆಸಿ ಗಡಿ ಗುರ್ತಿಸಲಾಗಿತ್ತು. ಆದರೆ ಇದಕ್ಕೆ ಒಪ್ಪದ ರವಿ ಒತ್ತುವರಿ ಮಾಡಿಕೊಂಡು 2022, ಮಾ.21ರಂದು ಜಮೀನನ್ನು ಉಳುಮೆ ಮಾಡುತ್ತಿದ್ದನು. ಈ ಬಗ್ಗೆ ಚಿಕ್ಕಮಣಿ ಹಾಗೂ ಪುತ್ರ ಮನೋಜ್ ಸ್ಥಳಕ್ಕೆ ತೆರಳಿ ಪ್ರಶ್ನಿಸಿದಾಗ ರವಿ ತನ್ನ ಕುಟುಂಬಸ್ಥರಾದ ಶ್ರೀಕಂಠಮೂರ್ತಿ, ಗಿರೀಶ್, ಶಶಿಕಲಾ, ಮಹೇಶ್ ಹಾಗೂ ಮಾದೇವಪ್ಪ ಎಂಬುವರ ಜತೆಗೂಡಿ ಮನೋಜ್‌ನಿಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಕಾಮಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮನೋಜ್ ಮೃತಪಟ್ಟಿದ್ದರು.
ಈ ಬಗ್ಗೆ ಅಂದಿನ ಹನೂರು ಪೊಲೀಸ್ ಠಾಣೆಯ ಇನ್‌ಪೆಕ್ಟರ್ ಸಂತೋಷ್ ಕಶ್ಯಪ್ ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಆರೋಪಿ ರವಿ ಎಂಬಾತನಿಗೆ ಕೊಳ್ಳೇಗಾಲ ನ್ಯಾಯಾಲಯದ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ಜೀವಾವಧಿ ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ಪಾವತಿಸುವಂತೆ ತೀರ್ಪು ನೀಡಿದ್ದು, ಉಳಿದ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಬಿ.ಪಿ ಮಂಜುನಾಥ್ ಹಾಗೂ ಸಿ.ಬಿ ಗಿರೀಶ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.