ನ್ಯೂಸ್

ಒಂದೇ ದಿನ 9 ವಲಸೆ ಕಾರ್ಮಿಕರನ್ನು ಕೊಂದಿದ್ದವನಿಗೆ ಗಲ್ಲುಶಿಕ್ಷೆ ವಿಧಿಸಿದ ವಾರಂಗಲ್​ ಕೋರ್ಟ್​

ವಾರಂಗಲ್​: ಒಂಭತ್ತು ವಲಸೆ ಕಾರ್ಮಿಕರನ್ನು ಹತ್ಯೆ ಮಾಡಿದ್ದ ವ್ಯಕ್ತಿಗೆ ಇಂದು ವಾರಂಗಲ್​ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿ ಆದೇಶ ನೀಡಿದೆ. ಈ ದುರುಳ ಮೇ 21ರಂದು ಪಶ್ಚಿಮ ಬಂಗಾಳ ಮತ್ತು ತ್ರಿಪುರಾದ ಒಟ್ಟು 9 ವಲಸೆ ಕಾರ್ಮಿಕರನ್ನು ವಾರಂಗಲ್​ ಗ್ರಾಮಾಂತರ ಜಿಲ್ಲೆಯ ಗೊರೆಕುಂಟಾ ಎಂಬ ಗ್ರಾಮದಲ್ಲಿ ಹತ್ಯೆ ಮಾಡಿದ್ದ.

ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ವಾರಂಗಲ್​ ಸೆಷನ್ಸ್​ ಕೋರ್ಟ್​ನ ನ್ಯಾಯಾಧೀಶ ಕೆ. ಜಯಕುಮಾರ್​ ಅವರು ಆರೋಪಿಗೆ ಮರಣದಂಡನೆ ವಿಧಿಸಿದ್ದಾರೆ. ಪ್ರಕರಣದ ವಿಚಾರಣೆ 36ದಿನಗಳಲ್ಲಿ ಮುಕ್ತಾಯವಾಗಿತ್ತು. ಆದರೆ ಕೊವಿಡ್​-19 ಲಾಕ್​ಡೌನ್​ನಿಂದಾಗಿ ಕೋರ್ಟ್​ಗಳು ಬಾಗಿಲು ಹಾಕಿದ್ದವು. ಇದರಿಂದಾಗಿ ತೀರ್ಪು ಬರುವುದು ತಡವಾಯಿತು.

ಸಂಜಯ್​ಕುಮಾರ್​ ಯಾದವ್​ (24) ಆರೋಪಿ. ಈತ ಪಶ್ಚಿಮ ಬಂಗಾಳ ಮೂಲದ 56 ವರ್ಷದ ಮಕ್ಸೂದ್ ಆಲಂ ಸೇರಿ ಅವರ ಕುಟುಂಬದವರನ್ನೆಲ್ಲ ಹತ್ಯೆ ಮಾಡಿದ್ದ. ಮಕ್ಸೂದ್​ ಆಲಂ ಗೋರೆಕುಂಟಾದಲ್ಲಿ ಗೋಣಿಚೀಲ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಕುಟುಂಬಕ್ಕೆ ಸೇರಿದ, ಆಂಧ್ರದಲ್ಲಿ ವಾಸವಾಗಿದ್ದ ಮಹಿಳೆಯೋರ್ವರನ್ನು ಅದಕ್ಕೂ ಮೊದಲೇ ಹತ್ಯೆ ಮಾಡಿದ್ದ. ಆ ಮಹಿಳೆಯನ್ನು ಕೊಂದ ಬಳಿಕ ಇಲ್ಲಿಗೆ ಬಂದು ಆಲಂ, ಅವರ ಪತ್ನಿ, ಇಬ್ಬರು ಪುತ್ರರು, ಮಗಳು, ಮೊಮ್ಮಗಳನ್ನು ಕೊಂದಿದ್ದ. ಅಷ್ಟೇ ಅಲ್ಲ, ಇವರ ಕುಟುಂಬಕ್ಕೆ ಸಂಬಂಧವೇ ಇಲ್ಲದಿದ್ದರೂ ಇನ್ನಿಬ್ಬರು ವಲಸೆ ಕಾರ್ಮಿಕರನ್ನು ಹತ್ಯೆ ಮಾಡಿದ್ದ. ಈ ಇಬ್ಬರಲ್ಲಿ ಓರ್ವ ಬಿಹಾರದವನು ಮತ್ತೋರ್ವ ತ್ರಿಪುರದವನು.

ಮೇ 21ರಂದು ಆಲಂ ಅವರ ಹುಟ್ಟಿದ ದಿನ ಇತ್ತು. ಅಂದು ಯಾದವ್​ ಆಲಂ ಕೆಲಸ ಮಾಡುತ್ತಿದ್ದ ಗೋಣಿ ಚೀಲ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ್ದ. ಅಂದು ಆಲಂ ಕುಟುಂಬದವರು ಮತ್ತು ಮೂವರು ವಲಸೆ ಕಾರ್ಮಿಕರು ಆ ಪಾರ್ಟಿಯಲ್ಲಿ ಇದ್ದರು. ಯಾದವ್​ ಅಂದು ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡು ಹೋಗಿ ತಿಂಡಿಯಲ್ಲಿ ಬೆರೆಸಿದ್ದ. ಬಳಿಕ ಆ ತಿಂಡಿಯನ್ನು ಅಲ್ಲಿದ್ದವರು ಸೇವಿಸಿದ್ದರು. ಇದನ್ನೂ ಓದಿ: ದುಬಾರಿ ಬೆಲೆಯ ಸ್ವಂತ ಮರ್ಸಿಡೀಸ್​ ಕಾರಿಗೆ ಬೆಂಕಿ ಇಟ್ಟ ಬ್ಲಾಗರ್​: ಕಾರಣ ಕೇಳಿದ್ರೆ ಅಚ್ಚರಿ ಖಂಡಿತ!

ನಿದ್ದೆ ಮಾತ್ರೆ ಬೆರೆಸಿದ್ದ ಆಹಾರ ಸೇವನೆ ಮಾಡಿದ್ದವರೆಲ್ಲ ರಾತ್ರಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದರು. ಎಚ್ಚರ ತಪ್ಪಿದ್ದ ಅವರನ್ನೆಲ್ಲ ಎಳೆದುಕೊಂಡು ಹೋದ ಯಾದವ್​ ಒಂದು ಬಾವಿಗೆ ಎಸೆದಿದ್ದ.  ಈ ಹತ್ಯೆಯ ತನಿಖೆ ಶುರು ಮಾಡಿದ್ದ ಪೊಲೀಸರು ಜುಲೈ 28ರಂದು ಚಾರ್ಜ್​ ಶೀಟ್​ ಸಲ್ಲಿಸಿದ್ದರು.

ಇಂದು ತೀರ್ಪು ನೀಡುವ ವೇಳೆ ಕೋರ್ಟ್​ನ ಆವರಣದಲ್ಲಿ ಭರ್ಜರಿ ಜನ ಸೇರಿದ್ದರು. ನ್ಯಾಯಾಧೀಶರು ಜಡ್ಜ್​ಮೆಂಟ್ ನೀಡುತ್ತಿದ್ದಂತೆ ಎಲ್ಲರೂ ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ಹತ್ಯೆ ಕೇಸ್​ಗೆ ಸಂಬಂಧಪಟ್ಟಂತೆ ಪೊಲೀಸರು ತುಂಬ ಚುರುಕಾಗಿ ಕೆಲಸ ಮಾಡಿದ್ದರು. ಸುಮಾರು 62 ಸಾಕ್ಷಿಗಳನ್ನು ಒದಗಿಸಿದ್ದರು.(ಏಜೆನ್ಸೀಸ್​)