ಜೈಪುರ: ಹೆಂಡತಿ ಬಿಟ್ಟುಹೋದಳು ಎನ್ನುವ ಸಿಟ್ಟಿನಿಂದಾಗಿ ಪತಿಯೊಬ್ಬ ತನ್ನ ನಾಲ್ಕು ಮುದ್ದಾದ ಗಂಡು ಮಕ್ಕಳನ್ನು ಕೊಂದಿರುವ ಘಟನೆ ರಾಜಸ್ಥಾನದ ಬನ್ಸ್ವಾರ ಜಿಲ್ಲೆಯಲ್ಲಿ ನಡೆದಿದೆ. ಮಕ್ಕಳನ್ನು ಕೊಂದ ಕೆಲ ಹೊತ್ತಿನಲ್ಲೇ ತಂದೆಯೂ ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿಯಾಗಿದೆ.
ಜಿಲ್ಲೆಯ ಕುಶಾಲ್ಗರ್ ಪೊಲೀಸ್ ಠಾಣಾ ವ್ಯಾಪ್ತಿಯ ಡಂಗ್ಲಪಾನಿ ಗ್ರಾಮದಲ್ಲಿ ಇಂತಹ ಘಟನೆ ನಡೆದಿದೆ. ಬಾಬು ಹೆಸರಿನ ವ್ಯಕ್ತಿ ಇತ್ತೀಚೆಗೆ ಪತ್ನಿಯೊಂದಿಗೆ ಜಗಳವಾಡಿಕೊಂಡಿದ್ದ. ಅದೇ ಸಿಟ್ಟಿನಿಂದಾಗಿ ಆಕೆ ಗಂಡ ಮತ್ತು ಮಕ್ಕಳನ್ನು ಬಿಟ್ಟು ತವರು ಮನಗೆ ಹೋಗಿದ್ದಳು. ಹೆಂಡತಿಯ ಮೇಲೆ ಕೋಪದಿಂದಾಗಿ ಬಾಬು ಮಂಗಳವಾರ ರಾತ್ರಿ ಕಂಠಪೂರ್ತಿ ಕುಡಿದು ಬಂದಿದ್ದಾನೆ. ಕುಡಿದ ಮತ್ತಿನಲ್ಲಿ ರಾಕೇಶ್, ಭಾಗಿಯಾ, ವಿಕ್ರಮ್ ಮತ್ತು ಗಣೇಶ್ ಹೆಸರಿನ ಮಕ್ಕಳನ್ನು ಕೊಂದಿದ್ದಾನೆ. ಈ ಎಲ್ಲ ಮಕ್ಕಳು 2ರಿಂದ 8ವರ್ಷ ವಯಸ್ಸಿನವರಾಗಿದ್ದರು. ಎಲ್ಲರನ್ನು ಕೊಂದ ನಂತರ ಮನೆಯ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ತಾನೂ ನೇಣಿಗೆ ಶರಣಾಗಿದ್ದಾನೆ.
ಬುಧವಾರ ಬೆಳಗ್ಗೆ ಅಕ್ಕಪಕ್ಕದವರಿಂದ ಈ ವಿಚಾರ ಪೊಲೀಸರಿಗೆ ತಿಳಿದುಬಂದಿದೆ. ತಕ್ಷಣ ಸ್ಥಳಕ್ಕೆ ಹೋದ ಪೊಲೀಸರು ಐವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. (ಪಿಟಿಐ)