ಬೆಂಗಳೂರು: ಸಾಮಾನ್ಯವಾಗಿ ಸಾರ್ವಜನಿಕವಾಗಿ ಸಮಸ್ಯೆ ಆಗುವಂಥ ಸಂಗತಿಗಳ ಬಗ್ಗೆ 'ನಮಗ್ಯಾಕೆ ಸುಮ್ನೆ ರಿಸ್ಕ್?' ಅಂತ ಸುಮ್ಮನಿರುವವರೇ ಜಾಸ್ತಿ. ಆದರೆ ಇಲ್ಲೊಬ್ಬರು ಹಾಗೆಂದುಕೊಳ್ಳದೆ ಸಮಸ್ಯೆ ಬಗೆಹರಿಸುವ ಕುರಿತು ಆಗ್ರಹಿಸುವ ಗಟ್ಟಿ ಗುಂಡಿಗೆಯನ್ನು ತೋರಿದ್ದಾರೆ.
ಅದರಲ್ಲೂ ಸಮಸ್ಯೆ ಬಗೆಹರಿಸಲು ಆಗ್ರಹ ವ್ಯಕ್ತಪಡಿಸುವ ನಿಟ್ಟಿನಲ್ಲಿ ಇವರು ತಳೆದ ನಿಲುವು ಇದೀಗ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದೆ. ಅಷ್ಟಕ್ಕೂಇವರು ಮಾಡಿದ್ದೇನೆಂದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಗುಂಡಿಯೊಳಗೇ ಕೂತು ಪ್ರತಿಭಟನೆ ನಡೆಸಿದ್ದು.
ಇದನ್ನೂ ಓದಿ: ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!
ರಾಜಧಾನಿ ಬೆಂಗಳೂರಿನ ಹನುಮಂತನಗರದ 4ನೇ ಅಡ್ಡರಸ್ತೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಗುಂಡಿ ತೋಡಲಾಗಿತ್ತು. ಕೇಬಲ್ ವಯರ್ ಅಳವಡಿಕೆಗೆ ತೋಡಲಾಗಿರುವ ಈ ಗುಂಡಿಯಲ್ಲಿ ಕೆಸರು ತುಂಬಿದ್ದು, ಆ ಗುಂಡಿಯೊಳಗೇ ಕೂತ ಅನಿಲ್ ಎಂಬವರು, ಗುಂಡಿ ಮುಚ್ಚಲು ಮುಂದಾಗುವವರೆಗೂ ಏಳುವುದಿಲ್ಲ ಎಂದು ಪ್ರತಿಭಟನೆ ನಡೆಸಿದ್ದಾರೆ.
ಗುಂಡಿಯಲ್ಲಿ ಯಾರೋ ಬಿದ್ದು ಪ್ರಾಣ ಹೋಗುವ ಮುನ್ನ ಮುಚ್ಚಬೇಕು, ಗುಂಡಿ ತೋಡಿಸಿದ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಾಗಬೇಕು, ಅಲ್ಲಿಯವರೆಗೂ ಗುಂಡಿಯಿಂದ ಏಳುವುದಿಲ್ಲ ಎಂದು ಇವರು ಬೆಳಗ್ಗೆಯಿಂದ ಗುಂಡಿಯಲ್ಲೇ ಕೂತು ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ.