ನ್ಯೂಸ್

ವಿಮಾನದಲ್ಲಿ ಬೆತ್ತಲೆ ಓಡಾಟ: ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪೊಲೀಸರ ಅತಿಥಿಯಾದ ಪ್ರಯಾಣಿಕ

ಮೆಲ್ಬೋರ್ನ್: ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರ ದುರ್ನಡತೆಯ ವಿರುದ್ಧದ ದೂರುಗಳು ಹೆಚ್ಚಾಗುತ್ತಿವೆ. ಇದೇ ರೀತಿ ಪ್ರಯಾಣಿಕರೊಬ್ಬರ ವಿಚಿತ್ರ ನಡವಳಿಕೆಯಿಂದ ಆಸ್ಟ್ರೇಲಿಯಾದಿಂದ ಮೆಲ್ಬೋರ್ನ್‌ಗೆ ತೆರಳುತ್ತಿದ್ದ ವಿಮಾನ ಟೇಕಾಫ್​ ಆದ ಕೆಲವೇ ಗಂಟೆಗಳಲ್ಲಿ ಹಿಂದಿರುಗಿದೆ.

ಫ್ಲೈಟ್ VA696 ಪರ್ತ್ ವಿಮಾನ ನಿಲ್ದಾಣದಿಂದ ಸ್ಥಳೀಯ ಕಾಲಮಾನ ಸುಮಾರು 7.20 ಗಂಟೆಗೆ ಹೊರಟಿತು. ಪ್ರಯಾಣಿಕರೊಬ್ಬರು ವಿಮಾನದಲ್ಲಿ ಬೆತ್ತಲೆಯಾಗಿ ಓಡಾಡಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಬೀಳಿಸಿದ್ದಾರೆ. ಅಲ್ಲದೆ ವಿಮಾನವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದಾರೆ. ಪಶ್ಚಿಮ ಕರಾವಳಿ ನಗರವಾದ ಪರ್ತ್‌ನಿಂದ ಪೂರ್ವ ಕರಾವಳಿಯ ಮೆಲ್ಬೋರ್ನ್‌ಗೆ ಮೂರು ಗಂಟೆ ಮೂವತ್ತು ನಿಮಿಷಗಳ ಪ್ರಯಾಣ ಮಾಡಬೇಕಿದ್ದ ವಿಮಾನ ಟೇಕಾಫ್​ ಆದ ಕೆಲ ಹೊತ್ತಿನಲ್ಲೇ ಈ ಘಟನೆ ನಡೆದಿದೆ.

ವ್ಯಕ್ತಿ ಯಾವಾಗ ತನ್ನ ಬಟ್ಟೆಗಳನ್ನು ಬಿಚ್ಚಿಟ್ಟಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ. ನ್ಯಾಯಾಲಯಕ್ಕೆ ಹಾಜರುಪಡಿಸಲು ಆರೋಪಿ ಮೇಲೆ ಯಾವ ಆರೋಪಗಳನ್ನು ಹೊರಿಸುತ್ತಿದ್ದಾರೆ ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ವಿಮಾನ ನಿಲ್ದಾಣದಲ್ಲಿದ್ದ ಆಸ್ಟ್ರೇಲಿಯಾ ಫೆಡರಲ್​ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿಸಿರುವ ಆರೋಪಿಯನ್ನ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂನ್ 14 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನವನ್ನು ಸುರಕ್ಷಿತವಾಗಿ ಪರ್ತ್‌ನಲ್ಲಿ ಇಳಿಸಲಾಗಿದ್ದು, ಘಟನೆಯಲ್ಲಿ ಸಹ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.

ಆರೋಪಿಯು ಮೈನಿಂಗ್​ ಎಂಜಿನಿಯರ್​ (23) ವಿದ್ಯಾರ್ಥಿಯಾಗಿದ್ದು, ತನ್ನ ವಿಶ್ವವಿದ್ಯಾಲಯದಲ್ಲಿ ಗ್ರಾಜ್ಯುಯೇಷನ್​ ಪಡೆಯಲು ಮೆಲ್ಬೋರ್ನ್‌ಗೆ ಪ್ರಯಾಣಿಸುತ್ತಿದ್ದ ಎಂದು ಸಹ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

"ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ಪ್ರಯಾಣಿಕರೊಬ್ಬರ ದುರ್ನಡತೆಯಿಂದಾಗಿ ಉಂಟಾದ ಅಡೆತಡೆಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ" ಎಂದು ಏರ್​ಲೈನ್ಸ್​​​ ವಕ್ತಾರರು ತಿಳಿಸಿದ್ದಾರೆ. (ಏಜೆನ್ಸೀಸ್​)