ಬೆಂಗಳೂರು: ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೈದರಾಬಾದ್ಗೆ ಕರೆಸಿಕೊಂಡು ಮತ್ತು ಬರುವ ತಂಪುಪಾನೀಯ ಕುಡಿಸಿ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿ ಹೆಬ್ಬಾಳ ನಿವಾಸಿ 26 ವರ್ಷದ ಕಿರುತೆರೆ ನಟಿಯೊಬ್ಬರು ಅಮೃತಹಳ್ಳಿ ಠಾಣೆಗೆ ದೂರು ಕೊಟ್ಟಿದ್ದಾರೆ.
6 ವರ್ಷಗಳ ಹಿಂದೆ ಕೃತ್ಯ ನಡೆದಿದ್ದು, ಕೋರ್ಟ್ಗೆ ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಹೈದರಾಬಾದ್ ಮೂಲದ ಸಂಗಮೇಶ್ ಪಾಟೀಲ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನಲ್ಲೇನಿದೆ?: 2013ರಲ್ಲಿ ನಿರ್ವಪಕ ಎಂದು ಹೇಳಿಕೊಂಡು ಸಂಗಮೇಶ್ ಎಂಬಾತ ಕರೆ ಮಾಡಿದ್ದ. ನಿಮ್ಮ ಮೊಬೈಲ್ ನಂಬರ್ ಅನ್ನು ಚಿತ್ರರಂಗದ ವ್ಯಕ್ತಿಯೊಬ್ಬರ ಬಳಿ ತೆಗೆದುಕೊಂಡೆ. ನಿಮಗೆ ಒಳ್ಳೆಯ ಅವಕಾಶ ಕೊಡಿಸುತ್ತೇನೆ ಎಂದು ಹೇಳಿದ್ದ. ಕೆಲ ದಿನಗಳ ನಂತರ ಕರೆ ಮಾಡಿ ಹೈದರಾಬಾದ್ಗೆ ಬಂದರೆ ಸಿನಿಮಾವೊಂದರಲ್ಲಿ ನಾಯಕ ನಟಿ ಪಾತ್ರ ಕೊಡಿಸುತ್ತೇನೆ ಎಂದಿದ್ದ. ಆತನ ಮಾತನ್ನು ನಂಬಿ ಹೈದರಾಬಾದ್ಗೆ ಹೋಗಿದ್ದೆ. ಈ ವೇಳೆ ಕಾರಿನಲ್ಲಿ ಹೋಟೆಲ್ಗೆ ಕರೆದೊಯ್ದಿದ್ದ. ಕುಡಿಯಲು ಮತ್ತು ಬರುವ ತಂಪು ಪಾನೀಯ ಕೊಟ್ಟು, ಅರೆಪ್ರಜ್ಞಾವಸ್ಥೆಯಲ್ಲಿದ್ದ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಎಚ್ಚರವಾದ ಬಳಿಕ ಗೊತ್ತಾದಾಗ ಸಮಾಧಾನಪಡಿಸಿ ಬೆಂಗಳೂರಿಗೆ ಕಳುಹಿಸಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ನಗ್ನ ವಿಡಿಯೋಗಳಿಂದ ಬೆದರಿಕೆ
2014ರಲ್ಲಿ ಕರೆ ಮಾಡಿದ್ದ ಆರೋಪಿ, ಕೂಡಲೇ ಗೋವಾಗೆ ಬರುವಂತೆ ಸೂಚಿಸಿದಾಗ ನಿರಾಕರಿಸಿದ್ದೆ. ಆಗ, ‘ನನ್ನ ಬಳಿ ನಗ್ನ ವಿಡಿಯೋಗಳಿವೆ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತೇನೆ’ ಎಂದು ಬ್ಲಾ್ಯಕ್ವೆುೕಲ್ ಮಾಡಿದ್ದ. ಇದರಿಂದ ಹೆದರಿ ಗೋವಾಕ್ಕೆ ಹೋಗಿದ್ದೆ. ಅಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಪ್ರತ್ಯೇಕ ಮನೆ ಮಾಡುವಂತೆ ಒತ್ತಾಯಿಸಿದ್ದ. ಮದುವೆ ಮಾಡಿಕೊಡುವಂತೆ ಕೇಳಿದ್ದಕ್ಕೆ ಕೊಲೆ ಮಾಡಿಸುವುದಾಗಿ ಬೆದರಿಸಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.