ನ್ಯೂಸ್

ಬುರ್ಖಾ ಧರಿಸಿ ಪುರುಷರೊಂದಿಗೆ ಸ್ನೇಹ ಬೆಳೆಸುತ್ತಿದ್ದ ಯುವಕ ಅಂದರ್!

ನಾಗ್ಪುರ: ಪುರುಷರೊಂದಿಗೆ ಸಂಪರ್ಕ ಬೆಳೆಸಲೆಂದು ಬುರ್ಖಾ ಧರಿಸಿ ಆಸ್ಪತ್ರೆ ಹಾಗೂ ಕಾಲೇಜು ಆವರಣದಲ್ಲಿ ಸುತ್ತಾಡುತ್ತಿದ್ದ ಸಲಿಂಗಕಾಮಿಯೊಬ್ಬನನ್ನು ಭದ್ರತಾ ಸಿಬ್ಬಂದಿಗಳು ಪತ್ತೆ ಮಾಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ನಾಗ್ಪುರದ ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ನಡೆದಿದೆ. ಇದನ್ನೂ ಓದಿ: ಮಾವನ 3 ಷರತ್ತುಗಳನ್ನು ಕೇಳಿ ಮದುವೆ ದಿನವೇ ಹೆಂಡತಿಯನ್ನು ಬಿಟ್ಟು ಹೋದ ಗಂಡ!

ಬುರ್ಖಾ ಧರಿಸಿದ್ದ ಜಾವೇದ್(32) ಎಂಬಾತ ತನ್ನನ್ನು ತಾನು ಆಯೇಶಾ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ. ವೈದ್ಯೆಯ ಸೋಗಿನಲ್ಲಿ ಆಸ್ಪತ್ರೆಯಲ್ಲಿದ್ದ ಪುರುಷ ರೋಗಿಗಳೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದ. ತಾನು ಪುರುಷ ಎಂಬುದನ್ನು ಮರೆಮಾಚಲು ಮುಖ ಕಾಣದಂತೆ ಬುರ್ಖಾ ಧರಿಸಿ ಆಸ್ಪತ್ರೆ ಆವರಣದಲ್ಲಿ ಸುತ್ತಾಡುತ್ತಿದ್ದ. ಈ ವೇಳೆ ಭದ್ರತಾ ಕೆಲಸಕ್ಕೆ ನಿಯೋಜಿತವಾಗಿದ್ದ ಮಹಾರಾಷ್ಟ್ರ ರಕ್ಷಣಾ ಪಡೆ ಸಿಬ್ಬಂದಿಗಳು ಅನುಮಾನ ಬಂದು ಬುರ್ಖಾ ತೆಗೆಸಿದ್ದಾರೆ. ಈ ವೇಳೆ ಈತನ ಅಸಲಿ ಮುಖ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಚಾರಣೆ ವೇಳೆ ಬಹಿರಂಗವಾಯ್ತು ಸಲಿಂಗಕಾಮದ ಚಟ

ಜಾವೇದ್ ವೃತ್ತಿಯಲ್ಲಿ ಕಂಪ್ಯೂಟರ್ ಮೆಕ್ಯಾನಿಕ್ ಆಗಿದ್ದು, ಸಲಿಂಗಕಾಮಿಯಾಗಿದ್ದ. ಪುರುಷರೊಂದಿಗೆ ಸ್ನೇಹ ಬೆಳೆಸಲೆಂದು ಆಸ್ಪತ್ರೆಗೆ ಬರುತ್ತಿದ್ದ. ಬಳಿಕ ವೈದ್ಯರ ಬಿಳಿ ಕೋಟ್ ಧರಿಸಿ, ಪುರುಷ ರೋಗಿಗಳನ್ನು ಪರೀಕ್ಷಿಸುವ ನೆಪದಲ್ಲಿ ಸಲುಗೆಯಿಂದ ಇರುತ್ತಿದ್ದ. ಬುರ್ಖಾ ಧರಿಸುತ್ತಿದ್ದರಿಂದ ಗುರುತು ಸಿಗುತ್ತಿರಲಿಲ್ಲ ಎಂದು ವಿಚಾರಣೆಯಿಂದ ಗೊತ್ತಾಗಿದೆ. ಜಾವೇದ್ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಹಸಿಲ್ ಪೊಲೀಸ್ ಇನ್ಸ್‌ಪೆಕ್ಟರ್ ಗೋಲ್ಹೆ ತಿಳಿಸಿದ್ದಾರೆ. (ಏಜೆನ್ಸೀಸ್)