ನ್ಯೂಸ್

ತನ್ನ ಬೆಕ್ಕು ಕಾಣೆಯಾದ ಸಿಟ್ಟಿನಲ್ಲಿ ನೆರೆಮನೆಯಲ್ಲಿದ್ದ 30 ಪಾರಿವಾಳಗಳಿಗೆ ವಿಷ ಹಾಕಿದ ಖದೀಮ!

ಶಹಜಹಾನ್‌ಪುರ: ಆತ ಮನೆಯಲ್ಲಿ ಪ್ರೀತಿಯಿಂದ ಬೆಕ್ಕು ಸಾಕಿದ್ದ. ಆದರೆ ಕಳೆದ ವಾರ ತನ್ನ ಪ್ರೀತಿಯ ಬೆಕ್ಕು ಕಾಣೆಯಾಗಿತ್ತು. ಎಲ್ಲಿ ಹುಡುಕಿದರೂ ಪತ್ತೆಯಿಲ್ಲ. ಒಂದೆರಡು ದಿನ ಕಳೆಯುತ್ತಿದ್ದಂತೆ ಬೆಕ್ಕು ಪ್ರಾಣ ಕಳೆದುಕೊಂಡಿರುವುದು ಗೊತ್ತಾಗಿದೆ. ತನ್ನ ಪ್ರೀತಿಯ ಸಾಕುಪ್ರಾಣಿ ಇಲ್ಲದಾಗಲು ತನ್ನ ವಠಾರದಲ್ಲಿದ್ದ ಪಕ್ಷಿ ಪ್ರೇಮಿಯೇ ಕಾರಣವೆಂದು ಭಾವಿಸಿದ್ದಾನೆ.

ನೆರೆಮನೆಯಾತ ತನ್ನ ಬೆಕ್ಕನ್ನು ಅಪಹರಿಸಿ, ಸಾಯಿಸಿದ್ದಾನೆ ಎಂದು ಭಾವಿಸಿಕೊಂಡು ವ್ಯಕ್ತಿಯೊಬ್ಬ ವಿಷ ಬೆರೆಸಿದ ಆಹಾರವನ್ನು ಪರಿವಾಳಗಳಿಗೆ ನೀಡಿದ್ದಾನೆ. ವಿಷಾಹಾರವನ್ನು ಸೇವಿಸಿದ ಸುಮಾರು 30 ಪಾರಿವಾಳಗಳು ಮೃತ ಪಟ್ಟಿರುವಂತಹ ಘಟನೆ ಉತ್ತರ ಪ್ರದೇಶದ ಸದರ್ ಬಜಾರ್​ ಎಂಬಲ್ಲಿ ನಡೆದಿದೆ.

ಆಬಿದ್ ಎಂಬಾತನ ಮನೆಯ ಬೆಕ್ಕು ಕಾಣೆಯಾಗಿತ್ತು. ತನ್ನ ವಠಾರದಲ್ಲೇ ವಾಸವಾಗಿದ್ದ ಪಕ್ಷಿ ಪ್ರೇಮಿ ವಾರಿಸ್ ಆಲಿ ಎಂಬಾತನೇ ಬೆಕ್ಕನ್ನು ಅಪಹರಿಸಿ ಕೊಂದಿದ್ದಾನೆ ಎಂದು ಆಬಿದ್ ಭಾವಿಸಿದ್ದಾನೆ. ಇದರಿಂದ ಕೋಪಗೊಂಡು, ಆಲಿ ಸಾಕುತ್ತಿದ್ದ ಪಾರಿವಾಳಗಳಿಗೆ ವಿಷ ಬೆರೆಸಿದ ಆಹಾರವನ್ನು ನೀಡಿದ್ದಾನೆ. ಪರಿಣಾಮ ಸುಮಾರು 70 ಪಾರಿವಾಳಗಳಲ್ಲಿ 30 ಪಾರಿವಾಳಗಳು ಮೃತಪಟ್ಟಿವೆ ಎಂದು ಜಿಲ್ಲಾ ಎಸ್​​ಪಿ ಸಂಜಯ್ ಕುಮಾರ್ ಹೇಳಿರುವುದು ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಆಬಿದ್ ಸೇರಿದಂತೆ ಮೂವರ ವಿರುದ್ಧ ಸೆಕ್ಷನ್ 428(ಪ್ರಾಣಿಗಳನ್ನು ಕೊಲ್ಲುವ ಮೂಲಕ ಕಿಡಿಗೇಡಿತನ) ನಂತೆ ಪ್ರಕರಣ ದಾಖಲಿಸಲಾಗಿದೆ. ಮೃತಪಟ್ಟಿರುವ ಪಾರಿವಾಳಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ ಜಿಲ್ಲಾ ಸಹಾಯಕ ಎಸ್​ಪಿ ಹೇಳಿದ್ದಾರೆ. (ಏಜೆನ್ಸೀಸ್)