ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿರುತ್ತವೆ. ಲೈಕ್ಸ್, ಶೇರ್ ಮತ್ತು ಖ್ಯಾತಿ ಗಳಿಸಲು ಅನೇಕ ಮಂದಿ ಎಲ್ಲ ರೀತಿಯ ಮೂರ್ಖತನವನ್ನು ಕೆಲವೊಮ್ಮೆ ಪ್ರದರ್ಶನ ಮಾಡುತ್ತಾರೆ. ಕೆಲವರಂತೂ ಪ್ರಾಣ ಕಳೆದುಕೊಳ್ಳುವ ಮಟ್ಟಕ್ಕೂ ಹೋಗುತ್ತಾರೆ. ಆದರೆ, ನಮ್ಮ ಜೀವವನ್ನಾಗಲಿ ಅಥವಾ ಇತರೆ ವ್ಯಕ್ತಿಗಳ ಪ್ರಾಣವನ್ನಾಗಲಿ ತೊಂದರೆಗೆ ಸಿಲುಕಿಸುವುದು ಒಳ್ಳೆಯದಲ್ಲ.
ಜಾಲತಾಣದಲ್ಲಿ ಸದ್ಯ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ವ್ಯಕ್ತಿಯೊಬ್ಬ ತನ್ನ ಬೈಕ್ ಹಿಂಬದಿಯಲ್ಲಿ ಪತ್ನಿಯನ್ನು ಕೂರಿಸಿ ಅಪಾಯಕಾರಿ ಸಾಹಸ ಮಾಡಿದ್ದಾನೆ. ಹೆಲ್ಮೆಟ್ ಧರಿಸದೇ ರಾಯಲ್ ಎನ್ಫೀಲ್ಡ್ ಬೈಕ್ ಸವಾರಿ ಮಾಡುವ ಮೂಲಕ ಸಂಚಾರಿ ನಿಯಮ ಉಲ್ಲಂಘಿಸಿದ್ದಲ್ಲದೆ, ಅಪಾಯಕಾರಿ ಸಾಹಸ ಮೂಲಕ ಪ್ರಾಣವನ್ನು ಪಣಕ್ಕಿಟ್ಟಿದ್ದಾನೆ. ಆತನ ಪತ್ನಿ ಸಹ ಹೆಲ್ಮೆಟ್ ಧರಿಸಿರಲಿಲ್ಲ.
ಪತ್ನಿ ಹಿಂದೆ ಕುಳಿತುರುವಾಗ ಹ್ಯಾಂಡಲ್ಗಳನ್ನು ಬಿಟ್ಟು, ಚಲಿಸುವ ಬೈಕ್ ಮೇಲೆಯೇ ಎದ್ದು ನಿಂತ ಅಪಾಯಕಾರಿ ಸಾಹಸ ಮಾಡಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು Ghantaa ಹೆಸರಿನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. 1 ಲಕ್ಷಕ್ಕೂ ಅಧಿಕ ಲೈಕ್ಗಳನ್ನು ಗಿಟ್ಟಿಸಿಕೊಂಡಿದೆ.
ಕಾಮೆಂಟ್ಗಳ ಮಹಾಪೂರವೇ ಹರಿದುಬರುತ್ತಿದೆ. ಕೆಲವರು ಬೈಕ್ ಸವಾರನ ಗಾಢನಂಬಿಕೆಯನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ಬೈಕ್ ಸವಾರನನ್ನು ಟೀಕಿಸಿದ್ದಾರೆ. ಪತ್ನಿಯ ಜೀವವನ್ನು ಪಣಕ್ಕಿಟ್ಟಿದ್ದಕ್ಕೆ ಕಿಡಿಕಾರಿದ್ದಾರೆ. (ಏಜೆನ್ಸೀಸ್)