ನ್ಯೂಸ್

ಜಾಮಿಯಾ ಮಿಲಿಯಾ ಆಯ್ತು ಈಗ ಶಾಹೀನ್ ಬಾಗ್​; ಇಲ್ಲಿಂದ ಜಾಗ ಖಾಲಿ ಮಾಡಿ ಎನ್ನುತ್ತ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದವ ಬಂಧನ

ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ಯೂನಿವರ್ಸಿಟಿ ಬಳಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ತೊಡಗಿದ್ದವರ ಮೇಲೆ ಈಗೆರಡು ದಿನಗಳ ಹಿಂದೆ ಅಪ್ರಾಪ್ತನೋರ್ವ ಗುಂಡಿನ ದಾಳಿ ನಡೆಸಿದ್ದ. ಆತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ಇಂದು ಬಾಲಾಪರಾಧಿ ಕೇಂದ್ರಕ್ಕೆ ಕಳಿಸಿದ್ದಾರೆ.

ಆದರೆ ಇಂದು ಮತ್ತೊಂದು ಅಂಥದ್ದೇ ಪ್ರಕರಣ ನಡೆದಿದೆ. ದೆಹಲಿಯ ಶಾಹೀನ್ ಬಾಗ್​ ಪ್ರದೇಶದಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ವ್ಯಕ್ತಿಯೋರ್ವ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎನ್ನಲಾಗಿದೆ.

ಜೆಸೋಲಾ ರೆಡ್​ಲೈಟ್​ ಪ್ರದೇಶದ ಸಮೀಪ ಗುಂಡಿನ ದಾಳಿ ನಡೆದಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವ್ಯಕ್ತಿ ಗಾಳಿಯಲ್ಲಿ ಗುಂಡು ಹಾರಿಸಿದ. ಕೂಡಲೇ ಪೊಲೀಸರು ಅವನನ್ನು ಬಂಧಿಸಿದ್ದಾರೆ ಎಂದು ದೆಹಲಿ ಡಿಸಿಪಿ ಚಿನ್ಮಯ್​ ಬಿಸ್ವಲ್​ ತಿಳಿಸಿದ್ದಾರೆ.

ನಮ್ಮ ದೇಶದಲ್ಲಿ ಹಿಂದುಗಳ ಹೊರತಾಗಿ ಇನ್ಯಾರೂ ತಮ್ಮ ಅಭಿಪ್ರಾಯಗಳನ್ನು ಹೇರಬಾರದು ಎಂದು ಗುಂಡು ಹಾರಿಸಿದ ವ್ಯಕ್ತಿ ಹೇಳಿದ್ದು, ವಿಡಿಯೋ ವೈರಲ್​ ಆಗಿದೆ.

ಈ ವ್ಯಕ್ತಿ ಶಾಹೀನ್​ ಬಾಗ್​ ಪ್ರತಿಭಟನಾಕಾರರ ಬಳಿ ಬಂದು ಅಲ್ಲಿಂದ ಜಾಗ ಖಾಲಿ ಮಾಡುವಂತೆ ಬೆದರಿಸುತ್ತಿದ್ದ. ಬಳಿಕ ಗುಂಡು ಹಾರಿಸಿದ ಎಂದು ಸ್ಥಳೀಯರು ಹೇಳಿದ್ದಾರೆ.

ತನ್ನ ಹೆಸರು ಕಪಿಲ್​, ಪೂರ್ವ ದೆಹಲಿಯ ದಲ್ಲುಪುರಾ ಗ್ರಾಮದ ನಿವಾಸಿ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ. (ಏಜೆನ್ಸೀಸ್​)