ನ್ಯೂಸ್

ಜಾಮೀನಿನ ಮೇರೆಗೆ ಹೊರಬಂದಿದ್ದೇ ತಡ ಪತ್ನಿ, 3 ಮಕ್ಕಳನ್ನು ಹತ್ಯೆಗೈದ ಪಾಪಿ ತಂದೆ! ಬಳಿಕ ತಾನು ಆತ್ಮಹತ್ಯೆ | Family Murder

ವಾರಣಾಸಿ: ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ವ್ಯಕ್ತಿ, ಜಾಮೀನಿನ ಮೇರೆಗೆ ಹೊರಬಂದಿದ್ದೇ ತಡ ತನ್ನ ಪತ್ನಿ ಮತ್ತು ಮೂವರು ಮೂವರು ಮಕ್ಕಳನ್ನು ಗುಂಡಿಕ್ಕಿ ಹತ್ಯೆಗೈದ (Family Murder) ಘಟನೆ ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯಲ್ಲಿ ವರದಿಯಾಗಿದೆ.

ಪೊಲೀಸರ ಪ್ರಕಾರ, ವಾರಣಾಸಿಯ ಭೈದಾನಿ ಪ್ರದೇಶದಲ್ಲಿ ಸೋಮವಾರ (ನ.04) ತಡರಾತ್ರಿ ಆರೋಪಿ ರಾಜೇಂದ್ರ ಗುಪ್ತಾ (45) ತನ್ನ ಪತ್ನಿ ನೀತು ಗುಪ್ತಾ (43), ಅವರ ಮಕ್ಕಳಾದ ನವೇಂದ್ರ (25) ಮತ್ತು ಸುಬೇಂದ್ರ (15) ಮತ್ತು ಪುತ್ರಿ ಗೌರಂಗಿ (16) ಅವರನ್ನು ರಾತ್ರಿ ನಿದ್ರಿಸುತ್ತಿದ್ದ ವೇಳೆ ಗುಂಡಿಕ್ಕಿ ಕೊಂದಿದ್ದಾನೆ. ಘಟನೆಯ ನಂತರ ಮನೆ ತೊರೆದ ರಾಜೇಂದ್ರ, ಬಳಿಕ ನಗರದ ರೊಹನಿಯಾ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ಘಟನೆ ಕುಟುಂಬಸ್ಥರನ್ನು ಹಾಗೂ ಸ್ಥಳೀಯರನ್ನು ಬೆಚ್ಚಿ ಬೀಳಿಸಿದ್ದು, ಪ್ರಾಥಮಿಕ ತನಿಖೆಯಿಂದ ಪತ್ನಿ ಮತ್ತು ಮೂವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಸುಳಿವು ಪೊಲೀಸರಿಗೆ ಲಭಿಸಿದೆ.

ಕೌಟುಂಬಿಕ ಕಲಹ, ಮಾಟಮಂತ್ರ

ಘಟನೆಯ ಬಗ್ಗೆ ಮನೆಯ ಮಾಲೀಕರಿಂದ ಮಾಹಿತಿ ಪಡೆದ ನಂತರ, ವಾರಣಾಸಿ ಪೊಲೀಸರ ತಂಡವು ಸ್ಥಳಕ್ಕೆ ಧಾವಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ರಾಜೇಂದ್ರ ಗುಪ್ತಾ ತಾಯಿ, ದಂಪತಿಗಳು ಯಾವುದೋ ಒಂದು ವಿಚಾರಕ್ಕೆ ಪದೇ ಪದೇ ಜಗಳವಾಡುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ವಾರಾಣಸಿಯ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಗೌರವ್ ಬನ್ಸ್ವಾಲ್, “ಒಂದೇ ಕುಟುಂಬದ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಕೌಟುಂಬಿಕ ಕಲಹ, ಮಾಟಮಂತ್ರ ಸೇರಿದಂತೆ ಹಲವು ಕೋನಗಳಿಂದ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ" ಎಂದು ಹೇಳಿದ್ದಾರೆ.

ಕೊಲೆಯೋ? ಆತ್ಮಹತ್ಯೆಯೋ?

"ರಾಜೇಂದ್ರ ಗುಪ್ತಾ ಮೃತದೇಹವನ್ನು ವಾರಣಾಸಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಈ ಘಟನೆಯಲ್ಲಿ ಆತನನ್ನು ಕೊಲೆ ಮಾಡಲಾಗಿದೆಯೇ ಅಥವಾ ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಪ್ರತ್ಯೇಕ ತನಿಖೆ ಕೈಗೊಳ್ಳಲಾಗಿದೆ. ಹಲವು ಕೋನಗಳಲ್ಲಿ ತನಿಖೆಯನ್ನು ನಡೆಸಲಾಗುವುದು. ರಾಜೇಂದ್ರ ವಿರುದ್ಧ 1997ರಿಂದ ಕೊಲೆ ಪ್ರಕರಣವಿದ್ದು, ಇತ್ತೀಚೆಗೆ ಜಾಮೀನಿನ ಮೇರೆಗೆ ಹೊರಬಂದಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ,(ಏಜೆನ್ಸೀಸ್).