ನ್ಯೂಸ್

IRCTC ವೆಬ್‌ಸೈಟ್ ಹ್ಯಾಕ್ ಮಾಡಿ ನಕಲಿ ತತ್ಕಾಲ್ ಟಿಕೆಟ್‌ಗಳಿಂದ 30 ಲಕ್ಷ ಗಳಿಸಿದ ಖದೀಮ..!

ಆಗ್ರಾ: ಐಆರ್‌ಸಿಟಿಸಿ ವೆಬ್‌ಸೈಟ್ ಹ್ಯಾಕ್ ಮಾಡಿ, ನಕಲಿ ಹೆಸರಿನಲ್ಲಿ ತತ್ಕಾಲ್ ಟಿಕೆಟ್ ಕಾಯ್ದಿರಿಸಿ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದ ಖತರ್ನಾಕ್​ ಖದೀಮನನ್ನು ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಆಗ್ರಾ ಬಳಿ ನಡೆದಿದೆ.

ಆರೋಪಿಯನ್ನು ಉತ್ತರ ಪ್ರದೇಶದ ದಾದ್ರಿ ಮೂಲದ ಮೊಯಿನುದ್ದೀನ್ ಚಿಸ್ತಿ ಎಂದು ಗುರುತಿಸಲಾಗಿದ್ದು, ಗ್ರೇಟರ್ ನೋಯ್ಡಾದ ಅಯೋಧ್ಯಾ ಗಂಜ್‌ನಲ್ಲಿ ಟಿಕೆಟ್ ಬುಕಿಂಗ್ ಅಂಗಡಿ ನಡೆಸುತ್ತಿದ್ದನು. IRCTC ವೆಬ್‌ಸೈಟ್​​ನ್ನು ಹ್ಯಾಕ್ ಮಾಡಿ ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸುವುದು ಸೇರಿದಂತೆ ಟಿಕೆಟ್ ಬುಕಿಂಗ್‌ಗೆ ಅನಧಿಕೃತ ಸಾಫ್ಟ್‌ವೇರ್‌ ಬಳಸಿ ತತ್ಕಾಲ್ ಕೋಟಾದಡಿ ರೈಲು ಟಿಕೆಟ್‌ಗಳನ್ನು ಇತರರಿಗಿಂತ ವೇಗವಾಗಿ ಪಡೆದು, ಅವುಗಳನ್ನು ದುಬಾರಿ ಬೆಲೆ ಮಾರಾಟ ಮಾಡುತ್ತಿದ್ದನು.

ಒಂದೇ ಮೊಬೈಲ್ ಸಂಖ್ಯೆಯಿಂದ ಹೆಚ್ಚಿನ ಸಂಖ್ಯೆಯ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲಾಗುತ್ತಿರುವುದನ್ನು ದೆಹಲಿ ಸೈಬರ್ ಕ್ರೈಮ್ ಘಟಕ ಪತ್ತೆ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈತನಿಂದ ಲ್ಯಾಪ್ ಟಾಪ್, ಮೊಬೈಲ್ ಫೋನ್, ಪ್ರಿಂಟರ್, 88 ಟಿಕೆಟ್ ಹಾಗೂ 1.55 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯು 1989ರ ಭಾರತೀಯ ಗೃಹ ರೈಲ್ವೆ ಕಾಯಿದೆಯನ್ನು ಉಲ್ಲಂಘಿಸಿದ್ದು, ಈ ನಿಯಮದ ಪ್ರಕಾರ ನಕಲಿ ಹೆಸರಿನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವುದನ್ನು ನಿಷೇಧಿಸುತ್ತದೆ. ಆರೋಪಿಯು ಎರಡು ವರ್ಷದಲ್ಲಿ 30 ಲಕ್ಷ ರೂ.ವರೆಗೆ ವಂಚನೆ ಮಾಡಿರುವುದು ಪತ್ತೆಯಾಗಿದ್ದು, ಇಂತಹ ವಂಚನೆಗಳನ್ನು ತಡೆಗಟ್ಟಲು ಆಫ್‌ಲೈನ್ ಮತ್ತು ಅಧಿಕೃತ IRCTC ವೆಬ್‌ಸೈಟ್, ಅಪ್ಲಿಕೇಶನ್ ಮತ್ತು ನೋಂದಾಯಿತ ಏಜೆಂಟ್‌ಗಳ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಲು ಸೂಚಿಸಲಾಗಿದೆ.(ಏಜೆನ್ಸೀಸ್​)