ನ್ಯೂಸ್

ತಬ್ಲಿಘಿ ಜಮಾತ್​ ಸಮಾವೇಶಕ್ಕೆ ತೆರಳಿದ್ದ ಯುವಕ 45 ದಿನಗಳ ಬಳಿಕ ವಾಪಸ್​ ಹಳ್ಳಿಗೆ ಬಂದ... ಊರ ಜನರ ಆಕ್ರೋಶಕ್ಕೆ ಬಲಿಯಾದ..!

ನವದೆಹಲಿ: ಕರೊನಾ ವೈರಸ್​​ನಿಂದ ಕ್ರೈಂಗಳ ಪ್ರಮಾಣವೂ ಹೆಚ್ಚುತ್ತಿದೆಯಾ ಎಂಬುದೊಂದು ಅನುಮಾನ ಕಾಡುತ್ತಿದೆ. ಲಾಕ್​ಡೌನ್​ ಇದ್ದರೂ ಅದನ್ನೂ ಮೀರಿ ವೈದ್ಯರ ಮೇಲೆ, ಶಂಕಿತ ಕರೊನಾ ಸೋಂಕಿತರ ಮೇಲೆ ಹಲ್ಲೆ ನಡೆಯುತ್ತಿರುವುದು ದೇಶದ ವಿವಿಧ ಭಾಗಗಳಿಂದ ವರದಿಯಾಗುತ್ತಿದೆ.

ಈಗ ಇನ್ನೊಂದು ಆತಂಕಕಾರಿ ಘಟನೆ ನಡೆದಿದೆ. 22 ವರ್ಷದ ಮುಸ್ಲಿಂ ಯುವಕನನ್ನು ಆತನ ಹಳ್ಳಿಯ ಜನರೇ ಹೊಡೆದು ಸಾಯಿಸಿದ್ದಾರೆ. ಆತ ತಬ್ಲಿಘಿ ಜಮಾತ್​ನ ಸಮಾವೇಶಕ್ಕೆ ಹೋಗಿದ್ದೇ ಹತ್ಯೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಯುವಕನನ್ನು ಮೆಹಬೂಬ್​ ಅಲಿ ಎಂದು ಗುರುತಿಸಲಾಗಿದೆ. ಈತ ದೆಹಲಿಯ ಬವಾನದ ಹರೇವಾಲಿ ಗ್ರಾಮದವ.

ಮೆಹಬೂಬ್ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್​ ಸಮಾವೇಶಕ್ಕೆ ತೆರಳಿದ್ದ. 45 ದಿನಗಳು ಕಳೆದ ಬಳಿಕ ತರಕಾರಿ ಟ್ರಕ್​​ನಲ್ಲಿ ವಾಪಸ್​ ದೆಹಲಿಗೆ ಬಂದಿದ್ದ.

ಆತನನ್ನು ಆಝಾದ್​ಪುರ ತರಕಾರಿ ಮಾರುಕಟ್ಟೆಯಲ್ಲಿ ಹಿಡಿದು, ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ನಂತರ ಬಿಟ್ಟು ಕಳಿಸಲಾಗಿತ್ತು. ಆದರೆ ತನ್ನ ಹಳ್ಳಿಗೆ ಹೋದ ಆತನಿಗೆ ಸಾವು ಅಲ್ಲೇ ಕಾದಿತ್ತು.

ತಬ್ಲಿಘಿ ಜಮಾತ್​ನ ಸಮಾವೇಶದಲ್ಲಿ ಮೆಹಬೂಬ್​ ಪಾಲ್ಗೊಂಡಿದ್ದರಿಂದ ಹಳ್ಳಿಗರು ಆತನ ಬಗ್ಗೆ ತಪ್ಪು ತಿಳಿದಿದ್ದರು. ಮೆಹಬೂಬ್​ ನಮಗೆಲ್ಲ ಕರೊನಾ ವೈರಸ್​ ಹರಡಿಸಲೆಂದೇ ಬಂದಿದ್ದಾನೆ. ಆತ ಏನೋ ಪಿತೂರಿ ನಡೆಸುತ್ತಿದ್ದಾನೆ ಎಂದುಕೊಂಡ ಜನರು ಅವನಿಗೆ ಊರನ್ನು ಪ್ರವೇಶಿಸಲು ಬಿಡಲಿಲ್ಲ. ಅಷ್ಟೇ ಅಲ್ಲದೆ, ಹಳ್ಳಿಯವರೇ ಕೆಲವು ಸೇರಿಕೊಂಡು ಮೆಹಬೂಬ್​ಗೆ ವಿಪರೀತ ಹೊಡೆದಿದ್ದಾರೆ. ತೀವ್ರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಮೆಹಬೂಬ್​ ಹತ್ಯೆಗೆ ಸಂಬಂಧಪಟ್ಟಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಅನೇಕರ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)