ಪುಣೆ: ತನ್ನ ಹೆಂಡತಿ ಮತ್ತು ಮಗನಿಗೆ ನಿದ್ರೆ ಮಾತ್ರೆಗಳನ್ನು ಉಣಿಸಿ ಹತ್ಯೆಗೈದ ಪತಿ, ಅವರಿಬ್ಬರು ಮೃತಪಟ್ಟ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ (Harassment Case) ಸಂಭವಿಸಿದೆ.
ಸಾಲಗಾರರ ನಿರಂತರ ಮಾನಸಿಕ ಹಿಂಸೆಗೆ ಬೇಸತ್ತ ಪತಿರಾಯ, ಹೆಂಡತಿ ಮತ್ತು ಮಗನ ಬಳಿ ಕಷ್ಟವನ್ನು ತೋಡಿಕೊಂಡಿದ್ದಾರೆ. ಆದರೆ, ಚಿತ್ರಹಿಂಸೆ ಬಲವಂತವಾಗಿ ಸಾಯುವ ನಿರ್ಧಾರ ಕೈಗೊಳ್ಳುವಂತೆ ದೂಡಿದೆ. ತಾನು ಸಾವಿಗೀಡಾದರೆ ಪತ್ನಿ ಮತ್ತು ಪುತ್ರ ಅನಾಥರಾಗುತ್ತಾರೆ ಎಂದು ಚಿಂತಿಸಿದ ವ್ಯಕ್ತಿ, ಮೊದಲಿಗೆ ಅವರಿಬ್ಬರಿಗೂ ನಿದ್ರೆ ಮಾತ್ರೆಗಳನ್ನು ಕೊಟ್ಟು ಹತ್ಯೆಗೈದಿದ್ದಾನೆ. ನಂತರದಲ್ಲಿ ತಾನು ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದಾನೆ. ಆದರೆ, ಕುಟುಂಬಸ್ಥರ ಮಧ್ಯೆಪ್ರವೇಶದಿಂದ ಆತ ಸಾವಿನ ದವಡೆಯಿಂದ ಪಾರಾಗಿದ್ದಾನೆ.
ಅಧಿಕ ಸಂಖ್ಯೆಯಲ್ಲಿ ನಿದ್ರೆ ಮಾತ್ರೆಗಳನ್ನು ನೀಡಿ ಪತ್ನಿ ಮತ್ತು ಮಗನನ್ನು ಹತ್ಯೆಗೈದ ವ್ಯಕ್ತಿಯನ್ನು ಪುಣೆ ನಗರದ ವೈಭವ್ ಹಂಡೆ ಎಂದು ಗುರುತಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಕದಮ್, ಸುರೇಖಾ ಕದಮ್, ಸಂತೋಷ್ ಪವಾರ್ ಮತ್ತು ಜಾವೇದ್ ಖಾನ್ ಎಂಬ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸಂಬಂಧಿಕರ ಮನೆಯಲ್ಲಿ ವಾಸವಿದ್ದ ಮತ್ತೋರ್ವ ಪುತ್ರನಿಗೆ (14) ತಾನು ಅನುಭವಿಸುತ್ತಿರುವ ಹಿಂಸೆ ಬಗ್ಗೆ ವೈಭವ್ ಸಾಯುವ ಮುನ್ನ ಸಂದೇಶ ಕಳಿಸಿದ್ದಾರೆ. ಇದನ್ನು ನೋಡಿದ ಮಗ ಗಾಬರಿಗೊಂಡು, ತನ್ನ ಪೋಷಕರನ್ನು ಗಮನಿಸುವಂತೆ ಕುಟುಂಬಸ್ಥರಿಗೆ ತಿಳಿಸಿದ್ದಾನೆ. ವೈಭವ್ ಫೋನ್ಗೆ ಹಲವು ಬಾರಿ ಕರೆ ಮಾಡಿದರೂ ಅದಕ್ಕೆ ಸ್ಪಂದನೆ ಸಿಗದ ಹಿನ್ನಲೆ ಮನೆ ಮುಂದೆ ಕುಟುಂಬಸ್ಥರು ದೌಡಾಯಿಸಿದ್ದಾರೆ. ಬಾಗಿಲನ್ನು ಎಷ್ಟು ಬಾರಿ ಬಡಿದರೂ ತೆಗೆಯದ ಹಿನ್ನೆಲೆ ಬಲವಂತವಾಗಿ ಡೋರ್ನ ಒಡೆದು ಒಳಗೆ ಪ್ರವೇಶಿಸಿದಾಗ ಅಲ್ಲಿ ವೈಭವ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ವೇಳೆ ಆತ ಇನ್ನೂ ಉಸಿರಾಡುತ್ತಿದ್ದನ್ನು ಕಂಡು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
ವೈಭವ್ ತನ್ನ ದೂರಿನಲ್ಲಿ, ಸಾಲಗಾರರ ನಿರಂತರ ಕಿರುಕುಳಕ್ಕೆ ಬೇಸತ್ತು ನಾನು ಇಂತಹ ಕೆಟ್ಟ ನಿರ್ಧಾರ ಕೈಗೊಂಡೆ. ಅಸಲು ಮತ್ತು ಹೆಚ್ಚುವರಿ 9 ಲಕ್ಷ ರೂ.ಗಳನ್ನು ಸಾಲಗಾರರಿಗೆ ಹಿಂತಿರುಗಿಸಿದ್ದೇನೆ. ಆದರೂ ಸಹ ಇನ್ನೂ ಹೆಚ್ಚು ಹಣವನ್ನು ಕೊಡುವಂತೆ ಕಿರುಕುಳ ನೀಡುತ್ತಿದ್ದರು. ಪತ್ನಿ ಶುಭಾಂಗಿ ಹಂಡೆ (36) ಮತ್ತು 9 ವರ್ಷದ ಮಗ ಧನರಾಜ್ಗೆ ಬೆಳಗ್ಗೆ ನಿದ್ರೆ ಮಾತ್ರೆಗಳನ್ನು ನೀಡಿದ್ದರಿಂದ ಅವರು ಸಾವನ್ನಪ್ಪಿದರು. ಅವರಿಬ್ಬರು ಮೃತಪಟ್ಟ ನಂತರ ನಾನು ಫ್ಲಾಟ್‌ನಲ್ಲಿರುವ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಳ್ಳಲು ಪ್ರಯತ್ನಿಸಿದೆ ಎಂದು ಹೇಳಿದ್ದಾರೆ.
ಪಡೆದುಕೊಂಡ ಹಣವನ್ನು ಮರು ಪಾವತಿ ಮಾಡಿದ್ದರೂ ಸಹ ಹೆಚ್ಚಿನ ಬಡ್ಡಿಯನ್ನು ನೀಡಬೇಕು ಎಂದು ಒತ್ತಾಯಿಸಿದ್ದಲ್ಲದೇ, ವೈಭವ್ಗೆ ಮಾನಸಿಕವಾಗಿ ಚಿತ್ರಹಿಂಸೆ ನೀಡಿದ ಮೇರೆಗೆ ಆರೋಪಿಗಳ ವಿರುದ್ಧ ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ,(ಏಜೆನ್ಸೀಸ್).