ನ್ಯೂಸ್

ಒಂದೇ ಒಂದು ಸಿಗರೇಟ್​​ನ ವಿಚಾರಕ್ಕೆ ನಡೆದೇ ಹೋಯಿತು ಕೊಲೆ!

ಪಾಲ್​ಘರ್​: ಲಾಕ್​ಡೌನ್ ಅವಧಿಯಲ್ಲಿ ದೇಶದಲ್ಲಿ ಎಲ್ಲಿಯೂ ಬೀಡಿ, ಸಿಗರೇಟ್, ಗುಟ್ಖಾ, ಪಾನ್​, ಲಿಕ್ಕರ್ ಯಾವುದೂ ಸಿಗುತ್ತಿಲ್ಲ. ಅಕ್ರಮ ದಂಧೆಯ ಮೂಲಕ ಪಡೆದುಕೊಂಡವರು ಮಾತ್ರವೇ ಅದರ ಖುಷಿ ಅನುಭವಿಸ್ತಿದ್ದಾರೆ. ಇದು ಅಪರಾಧವೂ ಹೌದು. ಆದಾಗ್ಯೂ, ಸಿಕ್ಕ ಸಿಗರೇಟ್​ಗಾಗಿ ಜಗಳ ನಡೆದರೂ ಅಚ್ಚರಿ ಇಲ್ಲ. ಈ ಜಗಳ ಅತಿರೇಕಕ್ಕೆ ಹೋಗಿ ಒಂದು ಪ್ರಾಣಕ್ಕೆ ಎರವಾದ ಘಟನೆ ಮಹಾರಾಷ್ಟ್ರದ ಪಾಲ್​ಘರ್​ನ ವಸೈ ಎಂಬಲ್ಲಿ ಬುಧವಾರ ನಡೆದಿದೆ.

ಒಂದೇ ಒಂದು ಸಿಗರೇಟ್​ನ ವಿಚಾರವಾಗಿ ಸಂಬಂಧಿಕರಿಬ್ಬರ ನಡುವೆ ವಾಗ್ವಾದ ನಡೆದಿದೆ. ಅದು ಅತಿರೇಕಕ್ಕೆ ಹೋಗಿ ಕೊಲೆಯಲ್ಲ ಪರ್ಯಾವಸಾನವಾಗಿದೆ. ಹತ್ಯೆಗೀಡಾದವನನ್ನು ದಿನೇಶ್ ಪಾಟೀಲ್​(30) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಕೆನ್ನೆತ್​ ರೊಸಾರಿಯೋ(64) ಎಂದು ಗುರುತಿಸಲಾಗಿದೆ.

ಕೆನ್ನೆತ್ ರೊಸಾರಿಯೋ ಕಳೆದ ಭಾನುವಾರ ಈಸ್ಟರ್ ಸಂಡೇ ಆಚರಿಸಲು ದಿನೇಶ್ ಪಾಟೀಲ್​ ಜತೆಗೆ ಆತನ ಸಂಬಂಧಿಯ ಮನೆಗೆ ತೆರಳಿದ್ದರು. ನಂತರ ಅಲ್ಲೇ ಉಳಿದುಕೊಂಡಿದ್ದರು. ಬುಧವಾರ ಹಾಡುಹಗಲ್ಲಲ್ಲೇ ಒಂದು ಸಿಗರೇಟ್​ಗಾಗಿ ಈ ಇಬ್ಬರ ನಡುವೆ ವಾಗ್ವಾದ ಶುರುವಾಗಿತ್ತು. ಅದು ಹೊಡೆದಾಟದ ತನಕ ಹೋಗಿ ಕೊನೆಗೆ ರೊಸಾರಿಯೋ ಕೈಗೆ ಸಿಕ್ಕ ಚೂರಿ ಹಿಡಿದು ದಿನೇಶ್​ಗೆ ಹಲವು ಬಾರಿ ಇರಿದಿದ್ದ. ಪರಿಣಾಮ ದಿನೇಶ್ ಸ್ಥಳದಲ್ಲೇ ಮೃತಪಟ್ಟ ಎಂದು ಪಾಲ್​ಘರ್​ನ ಪೊಲೀಸ್​ ವಕ್ತಾರ ಹೇಮಂತ್ ಕಾಟ್ಕರ್​ ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಿರುವ ಮಾಣಿಕ್​ಪುರ ಪೊಲೀಸರು ಆತನ ವಿರುದ್ಧ ಹತ್ಯೆ ಮತ್ತು ಉದ್ದೇಶಪೂರ್ವಕ ಅವಮಾನ ಮತ್ತು ಇತರೆ ಆರೋಪಗಳನ್ನು ಹೊರಿಸಿ ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್​)