ನ್ಯೂಸ್

ಮಡಿ, ಮಡಿ ಎನ್ನುತ್ತಿದ್ದ ಮಡದಿಯನ್ನು ಕೊಂದು, ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಮೈಸೂರು: ವಿಪರೀತ ಮಡಿವಂತಿಕೆ ಮಾಡುತ್ತಾಳೆ ಎನ್ನುವ ಬೇಸರದಿಂದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಾಂತಮೂರ್ತಿ(40) ಹೆಸರಿನ ವ್ಯಕ್ತಿ ತನ್ನ ಹೆಂಡತಿ ಪುಟ್ಟಮಣಿ (38) ಜತೆ 15 ವರ್ಷಗಳಿಂದ ದಾಂಪತ್ಯ ಜೀವನ ನಡೆಸಿಕೊಂಡು ಬಂದಿದ್ದ. ದಂಪತಿಗೆ ಪಲ್ಲವಿ (7) ಮತ್ತು ಅಭಿ (12) ಎಂಬ ಇಬ್ಬರು ಮಕ್ಕಳಿದ್ದರು. ಪುಟ್ಟಮಣಿ ತನ್ನ ಗಂಡ ಎಲ್ಲೇ ಹೊರಗೆ ಹೋಗಿ ಬಂದರೂ ಮನೆಯೊಳಗೆ ಬರುವಾಗ ಸ್ನಾನ ಮಾಡಿ ಬರುವಂತೆ ಹೇಳುತ್ತಿದ್ದಳಂತೆ. ಆತ ಮನೆ ಖರ್ಚಿಗೆ ಹಣ ಕೊಟ್ಟರೂ ಅದರಲ್ಲೂ ಸಹ ಮಡಿವಂತಿಕೆ ಮಾಡುತ್ತಿದ್ದಳು. ಇದೇ ಕಾರಣದಿಂದಾಗಿ ಮನೆಯಲ್ಲಿ ಅನೇಕ ಬಾರಿ ಗಲಾಟೆ ನಡೆಯುತ್ತಿರುತ್ತಿತ್ತು.

ಪತ್ನಿಯ ಮಡಿವಂತಿಕೆಯಿಂದ ಬೇಸತ್ತ ಶಾಂತಮೂರ್ತಿ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಹೆಂಡತಿಯ ಕೊಲೆಗೈದಿದ್ದಾನೆ. ಮಚ್ಚಿನಿಂದ ಕುತ್ತಿಗೆಗೆ ಹೊಡೆದಿದ್ದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಹೆಂಡತಿಯನ್ನು ಕೊಂದ ಶಾಂತಮೂರ್ತಿ ತಾನೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಘಟನೆ ನಡೆದ ಸ್ಥಳಕ್ಕೆ ನಂಜನಗೂಡಿನ ಡಿವೈಎಸ್​ಪಿ ಪ್ರಭಾಕರ್​ ರಾವ್​ ಶಿಂಧೆ ಭೇಟಿ ನೀಡಿದ್ದು, ಬಿಳಿಗೆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.