ಬೆಂಗಳೂರು: ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾದ ವ್ಯಕ್ತಿಯನ್ನು ಪತಿಯೇ ಹತ್ಯೆಗೈದಿರುವ ಪ್ರಕರಣ ಗಿರಿನಗರದಲ್ಲಿ ನಡೆದಿದೆ.
ಆಂಧ್ರಪ್ರದೇಶ ಮೂಲದ ವೆಂಕಟೇಶ್(೪೦) ಕೊಲೆಯಾದವ. ಕೃತ್ಯ ಎಸಗಿದ ಸಿದ್ದರಾಜು(೪೨) ಎಂಬಾತನನ್ನು ಬಂಧಿಸಲಾಗಿದೆ.
ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಸಿದ್ದರಾಜು, ೧೨ ವರ್ಷಗಳ ಹಿಂದೆ ಮದುವೆಯಾಗಿದ್ದು, ಪತ್ನಿ ಜತೆ ಗಿರಿನಗರದ ಮುನೇಶ್ವರ ಬ್ಲಾಕ್‌ನಲ್ಲಿ ವಾಸವಾಗಿದ್ದ. ಕೊಲೆಯಾದ ವೆಂಕಟೇಶ್, ಆಂಧ್ರಪ್ರದೇಶ ಮೂಲದವನಾಗಿದ್ದು, ಕೆಲವರ್ಷಗಳಿಂದ ಗಿರಿನಗರದಲ್ಲೇ ವಾಸವಾಗಿ, ಟೈಲರಿಂಗ್ ಕೆಲಸ ಮಾಡಿಕೊಂಡಿದ್ದ. ಈ ಮಧ್ಯೆ ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಆಗಾಗ್ಗೆ ಜಗಳ ನಡೆಯುತ್ತಿತ್ತು. ಅಲ್ಲದೆ, ಪತ್ನಿ ಪರಪುರುಷನ ಜತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ, ಆಕೆ ಮೇಲೆ ಹಲ್ಲೆ ನಡೆಸುತ್ತಿದ್ದ. ಇದೇ ವೇಳೆ ಎರಡು ದಿನಗಳ ಹಿಂದೆ ವೆಂಕಟೇಶ್, ಸಿದ್ದರಾಜು ಪತ್ನಿ ಜತೆ ಆತ್ಮೀಯವಾಗಿ ಮಾತನಾಡುತ್ತಿದ್ದ. ಅದನ್ನು ಕಂಡ ಸಿದ್ದರಾಜು, ವೆಂಕಟೇಶ್‌ಗೆ ಪ್ರಶ್ನಿಸಿ, ಚಪ್ಪಲಿಯಿಂದ ಹೊಡೆದು, ವೆಂಕಟೇಶ್‌ನನ್ನು ಜೋರಾಗಿ ತಳ್ಳಿದ್ದಾನೆ. ಆಯಾ ತಪ್ಪಿದ ವೆಂಕಟೇಶ್ ಕೆಳಗೆ ಬಿದ್ದ ಪರಿಣಾಮ ಆತನ ತಲೆಗೆ ತೀವ್ರ ಪೆಟ್ಟಾಗಿ, ರಕ್ತಸ್ರಾವವಾಗಿತ್ತು. ಅದನ್ನು ಕಂಡು ಗಾಬರಿಗೊಂಡ ಸಿದ್ದರಾಜು, ಸ್ಥಳೀಯರ ನೆರವು ಪಡೆದು ವೆಂಕಟೇಶ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ,ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿಮೃತಪಟ್ಟಿದ್ದಾನೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.