ನ್ಯೂಸ್

ಅತ್ಯಾಚಾರ ಮಾಡಿದ್ದಕ್ಕೆ ದೂರು ಕೊಟ್ರು ಅಂತ ಸಂತ್ರಸ್ತೆಯನ್ನೇ ಅಪಹರಿಸಿದ!

ಉತ್ತರಪ್ರದೇಶ: ಇಲ್ಲೊಬ್ಬ ವ್ಯಕ್ತಿ ಅತ್ಯಾಚಾರ ಮಾಡಿದ್ದಲ್ಲದೆ, ಆ ಕುರಿತು ದೂರು ನೀಡಿದ ಸಿಟ್ಟಿಗೆ ಸಂತ್ರಸ್ತೆಯನ್ನೇ ಅಪಹರಣ ಮಾಡಿದ ಪ್ರಸಂಗವೊಂದು ನಡೆದಿದೆ. ಆದರೆ ಅಪಹೃತ ಸಂತ್ರಸ್ತೆಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಉತ್ತರಪ್ರದೇಶದ ತಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ವೀರೇಶ್​ ಶರ್ಮಾ ಎಂಬಾತನೇ ಅತ್ಯಾಚಾರ ಮತ್ತು ಅಪಹರಣದ ಆರೋಪಿ. ಈತ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅದೇ ಶಾಲೆಯ 22 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ. ಅಲ್ಲದೆ ಆತ ಆ ಕುರಿತು ವಿಡಿಯೋ ಕೂಡ ಮಾಡಿಕೊಂಡಿದ್ದು, ಅದು ವೈರಲ್ ಆಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ತಂದೆ ಪೊಲೀಸರಿಗೆ ಜುಲೈ 27ರಂದು ದೂರು ನೀಡಿದ್ದರು. ಆದರೆ ದೂರು ನೀಡಿದ ಸಿಟ್ಟಿಗೆ ಅದೇ ದಿನ ಆರೋಪಿ ಸಂತ್ರಸ್ತೆಯನ್ನು ಅಪಹರಣ ಮಾಡಿದ್ದ. ಈ ಬಗ್ಗೆ ತಂದೆ ಮತ್ತೆ ಪೊಲೀಸರಿಗೆ ಅಪಹರಣ ದೂರು ನೀಡಿದ್ದರು.

ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ತನಿಖೆಗಿಳಿದಾಗ ಸಂತ್ರಸ್ತೆ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಪತ್ತೆಯಾಗಿದ್ದು, ಆಕೆಯನ್ನು ರಕ್ಷಿಸಿ ಹೇಳಿಕೆಯನ್ನು ಪಡೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.