ಲಾಹೋರ್: ಪಾಕಿಸ್ತಾನಿ ವ್ಯಕ್ತಿಯೊಬ್ಬ ತನ್ನ ಸಹೋದರನ ಮದುವೆ ಸಮಾರಂಭವನ್ನು ಅದ್ಧೂರಿಯಾಗಿ ನೆರವೇರಿಸಿದ್ದು, ವಿವಾಹಕ್ಕೆ ಆಗಮಿಸಿದ ಅತಿಥಿಗಳ ಮುಂದೆ ತನ್ನ ಉಡುಗೊರೆಯನ್ನು (Garland Gift) ಮುಂದಿಡುವ ಮೂಲಕ ಎಲ್ಲರನ್ನು ಒಂದು ನಿಮಿಷ ಅಚ್ಚರಿಗೆ ದೂಡಿದ್ದಾನೆ. ತಮ್ಮನ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂಬಂಧಿಕರು, ಸಹೋದರನಿಗೆ ಸಾಲಾಗಿ ಬಂದು ಶುಭಹಾರೈಸಿ, ಉಡುಗೊರೆಯನ್ನು ನೀಡುತ್ತಿದ್ದರು. ಈ ವೇಳೆ ನಿಮ್ಮೆಲ್ಲರಿಗಿಂತ ನಾನು ವಿಭಿನ್ನ ಹಾಗೂ ದುಬಾರಿ ಗಿಫ್ಟ್ ಹೊತ್ತು ತಂದಿದ್ದೀನಿ ಎಂದು ವೇದಿಕೆಯಲ್ಲಿದ್ದ ಅತಿಥಿಗಳ ಗಮನವನ್ನು ತನ್ನತ್ತ ಸೆಳೆದ ಈತನ ದೃಶ್ಯ ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಪಾಕಿಸ್ತಾನದ ಭಕ್ಕರ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವರನಿಗೆ ಆತನ ಸಹೋದರ ಬರೋಬ್ಬರಿ 2 ಸಾವಿರ ನೋಟುಗಳನ್ನು ಬಳಸಿಕೊಂಡು 35 ಅಡಿ ಉದ್ದದ ಹಾರವನ್ನು ಉಡುಗೊರೆಯಾಗಿ ನೀಡಿದ್ದಾನೆ. ತಾನು ತಂದಿದ್ದ ಗಿಫ್ಟ್ ಅನ್ನು ತೋರಿಸಲು ಮುಂದಾದ ಸಹೋದರ, ಉಡುಗೊರೆ ಹೊತ್ತು ತರುತ್ತಿದ್ದಂತೆ ಅತಿಥಿಗಳಿಗೆ ನಿಲ್ಲಲು ಜಾಗವಿಲ್ಲದಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದೃಶ್ಯ ಸ್ಥಳದಲ್ಲಿದ್ದವರ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು, ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, 2 ಸಾವಿರ ನೋಟುಗಳಿಂದ ರಚಿಸಲಾದ ಹಾರವು ಒಂದು ಲಕ್ಷ ಪಾಕಿಸ್ತಾನಿ ರೂಪಾಯಿ ಮೌಲ್ಯದ ನೋಟುಗಳನ್ನು ಒಳಗೊಂಡಿದೆ. ಈ ಆಕರ್ಷಕ ಉಡುಗೊರೆಯನ್ನು 75 ರೂ.ಗಳ 200 ನೋಟುಗಳು ಮತ್ತು 50 ರೂ.ಗಳ 1,800 ನೋಟುಗಳನ್ನು ಹಾಕಿ ಹೊಲಿಯಲಾಗಿದೆ. ಈ ಹಾರಕ್ಕಾಗಿ ಒಟ್ಟು 2,000 ನೋಟುಗಳನ್ನು ಬಳಕೆ ಮಾಡಲಾಗಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).