ನ್ಯೂಸ್

ಸಹೋದರನಿಗೆ ಮದುವೆ Gift ಆಗಿ 35 ಅಡಿ ಉದ್ದದ ನೋಟಿನ ಹಾರ ನೀಡಿದ ಅಣ್ಣ; ಇದರ ತಯಾರಿಕೆಗೆ ಬಳಕೆ ಮಾಡಿದ ನೋಟುಗಳ ಸಂಖ್ಯೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

ನವದೆಹಲಿ: ನಾವು ನೋಡಿರುವಂತೆ ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ದುಬಾರಿ ಬೆಲೆಯ ಉಡುಗೊರೆಗಳನ್ನು (Gifts) ನೀಡುವ ಮೂಲಕ ವರ ಮತ್ತು ವಧುವಿನ ಕಡೆಯವರು ಎಲ್ಲರ ಗಮನ ಸೆಳೆಯುತ್ತಾರೆ. ಭಾರತ ಮತ್ತು ನೆರೆಹೊರೆಯ ದೇಶಗಳಲ್ಲಿ ಮದುವೆ ಸೀಸನ್​ ಜೋರಾಗಿ ನಡೆಯುತ್ತಿದ್ದು, ಒಂದಿಲ್ಲೊಂದು ಕಾರಣಕ್ಕೆ ಮದುವೆಗೆ ಸಂಬಂಧಿಸಿದ ಸುದ್ದಿಗಳು ಸದ್ದು ಮಾಡುತ್ತವೆ. ಉತ್ತರಪ್ರದೇಶದಲ್ಲಿ ವರನಿಗೆ ಹಾಕಿದ್ದ ಹಣದ ಹಾರಕ್ಕೆ ಸಂಬಂಧಿಸಿದ ಸುದ್ದಿ ವೈರಲ್​ ಆಗಿದ್ದ ನಡುವೆಯೇ ಇದೀಗ ಪಾಕಿಸ್ತಾನದಲ್ಲೂ ಕೂಡ ಅದೇ ರೀತಿಯ ಘಟನೆ ನಡೆದಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಪಾಕಿಸ್ತಾನದ ಭಕ್ಕರ್​ನಲ್ಲಿ ವ್ಯಕ್ತಿಯೊಬ್ಬರು ತಮ್ಮ ಸಹೋದರನ ಮದುವೆಯನ್ನು ಅದ್ಧೂರಿಯಾಗಿ ಆಚರಿಸಿದ್ದು, ನೋಟುಗಳಿಂದ ಮಾಡಿದ 35 ಅಡಿ ಉದ್ದದ ಹಾರವನ್ನು ಮಾಡಿಸಿ ವರನಿಗೆ ಉಡುಗೊರೆಯಾಗಿ (Gift) ನೀಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವರನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಪಾಕಿಸ್ತಾನದ ಪಂಜಾಬ್‌ನ ಕೋಟ್ಲಾ ಜಾಮ್ ಪ್ರದೇಶದ ನಿವಾಸಿಯೊಬ್ಬರು ತಮ್ಮ ಸಹೋದರನ ಮದುವೆಯ ದಿನ 75 ರೂ.ಗಳ 200 ನೋಟುಗಳು ಮತ್ತು 50 ರೂ.ಗಳ 1700 ನೋಟುಗಳನ್ನು ಬಳಸಿ 35 ಅಡಿ ಉದ್ದದ ಹಾರವನ್ನು ತಯಾರಿಸಿ ಉಡುಗೊರೆಯಾಗಿ ನೀಡಿದ್ದಾರೆ. ಅಂದಾಜು 2000 ನೋಟುಗಳನ್ನು ಹಾರ ತಯಾರಿಸಲು ಬಳಸಲಾಗಿದ್ದು, ಈ ವಿಚಾರ ತಿಳಿದ ಜನರು ನೋಟುಗಳಿರುವ ಹಾರವನ್ನು ವೀಕ್ಷಿಸಲು ಸಹಸ್ರ ಸಂಖ್ಯೆಯಲ್ಲಿ ಸೇರಿದ್ದರು ಎಂದು ವರದಿಯಾಗಿದೆ.