ನ್ಯೂಸ್

39,000 ರೂ. ಊಟದ ಬಿಲ್​! 4 ದಿನ ವಾಸ, 5ನೇ ದಿನ ಪರಾರಿ; ಐಷಾರಾಮಿ ಹೋಟೆಲ್​ ಮಾಲೀಕ ಕಂಗಾಲು | Hotel Bill

ಮೋಹನ್​ ಶೆಟ್ಟಿ

Hotel Bill: 5 ಸ್ಟಾರ್​ ಹೋಟೆಲ್​ಗಳಲ್ಲಿ ದೊರೆಯುವ ಐಷಾರಾಮಿ ಸೇವೆಗಳನ್ನು ಅನುಭವಿಸುವ ಸಲುವಾಗಿ ಕೆಲವು ಗ್ರಾಹಕರು, ಹೋಟೆಲ್​ ಸಿಬ್ಬಂದಿ ಮತ್ತು ಮಾಲೀಕರ ಕೆಲಸಕ್ಕೆ ಕುತ್ತು ತರುವಂತ ಪಜೀತಿಗೆ ತಂದಿಡುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಸದ್ಯ ಇಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ವಾರಣಾಸಿಯ ಐಷಾರಾಮಿ ಹೋಟೆಲ್‌ವೊಂದರಲ್ಲಿ ನಾಲ್ಕು ದಿನಗಳ ಕಾಲ ವಾಸ್ತವ್ಯ ಹೂಡಿ, ಅಲ್ಲಿಯೇ ಭೂರಿ ಭೋಜನವನ್ನು ಸವಿದ ವ್ಯಕ್ತಿಯೊಬ್ಬ, 2 ಲಕ್ಷ ರೂ. ಬಿಲ್​ ಆಗ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತ ಘಟನೆ ಒಡಿಶಾದಲ್ಲಿ ವರದಿಯಾಗಿದೆ.

ಐಷಾರಾಮಿ ಅನುಭವ

39,000 ರೂ. ಊಟದ ಬಿಲ್​ ಸೇರಿ ಒಟ್ಟು 2 ಲಕ್ಷ ರೂ. ಹಣ ವಂಚಿಸಿರುವ ಗ್ರಾಹಕ, ಸಿಬ್ಬಂದಿಗಳ ಗಮನಕ್ಕೆ ಬಾರದಂತೆ ಐದನೇ ದಿನಕ್ಕೆ ಪರಾರಿಯಾಗಿರುವುದಾಗಿ ಫೈವ್ ಸ್ಟಾರ್ ಹೋಟೆಲ್​ ಮಾಲೀಕರು ಪೊಲೀಸರ ಬಳಿ ದೂರು ದಾಖಲಿಸಿದ್ದಾರೆ. ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ ಎಂದು ಆರೋಪಿಸಿರುವ ಮಾಲೀಕರು, ಆದಷ್ಟು ಬೇಗ ಆರೋಪಿಯನ್ನು ಬಂಧಿಸಿ, ನಮ್ಮ ಬಿಲ್​ ಪಾವತಿಸುವಂತೆ ಮಾಡಿ ಎಂದು ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಹೋಟೆಲ್ ತಾಜ್ ಗಂಗಾನದ ವ್ಯವಸ್ಥಾಪಕ ರಿಖಿ ಮುಖರ್ಜಿ ಸಲ್ಲಿಸಿರುವ ದೂರಿನ ಪ್ರಕಾರ, ಆರೋಪಿ ಸಾರ್ಥಕ್ ಸಂಜಯ್ ಅಕ್ಟೋಬರ್ 14ರಿಂದ 18ರವರೆಗೆ ಐಷಾರಾಮಿ ರೂಮ್​ನಲ್ಲಿ ಉಳಿದುಕೊಂಡಿದ್ದ ಎಂದು ತಿಳಿಸಿದ್ದಾರೆ.

ಬಟ್ಟೆ ಬಿಟ್ಟರೆ ಬೇರೇನೂ ಇಲ್ಲ

ರೂಮ್​ ಸಂಖ್ಯೆ 127ರಲ್ಲಿ ನಾಲ್ಕು ದಿನಗಳ ತಂಗಲು ಒಟ್ಟು 1,67,796 ರೂ.ಗಳಾಗಿದ್ದು, ಹೋಟೆಲ್‌ನಲ್ಲಿದ್ದ ಸಮಯದಲ್ಲಿ ಆತ ಸೇವಿಸಿದ ಆಹಾರದ ಬಿಲ್‌ 39,000 ರೂ. ಆಗಿವೆ. ಆರೋಪಿ ಸಂಜಯ್ ಪಾವತಿಸಬೇಕಿರುವ ಒಟ್ಟು ಮೊತ್ತ 2,04,521 ರೂ. ಎಂದು ದೂರುದಾರರು ಆರೋಪಿಸಿದ್ದಾರೆ. ನಮ್ಮ ಸಿಬ್ಬಂದಿಗಳ ಕಣ್ಣಿಗೆ ಬೀಳದ ಹಿನ್ನೆಲೆ ಆತ ಉಳಿದಿದ್ದ ರೂಮ್​ ಅನ್ನು ಪರಿಶೀಲಿಸಲಾಯಿತು. ಅಲ್ಲಿ ಕೆಲವು ಬಟ್ಟೆಗಳನ್ನು ಹೊರತುಪಡಿಸಿದರೆ, ಇನ್ನೇನು ಇರಲಿಲ್ಲ. ಆರೋಪಿಯ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ, ಫೋನ್​ ಸ್ವಿಚ್​ ಆಫ್​ ಆಗಿತ್ತು ಎಂದು ಮುಖರ್ಜಿ ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಯನ್ನು ಚುರುಕುಗೊಳಿಸಿದ್ದಾರೆ,(ಏಜೆನ್ಸೀಸ್).