ಹನೂರು: ಸಮೀಪದ ಆರ್.ಎಸ್ ದೊಡ್ಡಿ ಮೂಲಕ ಎಡಹಳ್ಳಿ ದೊಡ್ಡಿಗೆ ತೆರಳುವ ರಾಯರದೊಡ್ಡಿ ಬಳಿಯ ಹಳ್ಳವೊಂದರಲ್ಲಿ ಒಂಬತ್ತು ವರ್ಷದ ಅಪ್ರಾಪ್ತೆಯನ್ನು ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿ ಪರಾರಿಯಾಗಿದ್ದು, ಈ ಸಂಬಂಧ ಸೋಮವಾರ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮಿಳುನಾಡಿನ ಸೇಲಂ ಜಿಲ್ಲೆಯ ಹೊಮ್ಮನೂರು ಗ್ರಾಮದ ನಾರಾಯಣ ಎಂಬುವರ ಪುತ್ರ ವೆಟ್ರಿವೇಲ್ (21) ಅತ್ಯಾಚಾರ ಎಸಗಿದ ಆರೋಪಿ.
ಅಪ್ರಾಪ್ತೆಯ ತಂದೆ ತಮಿಳುನಾಡು ಮೂಲದವನಾಗಿದ್ದು, ಬಾವಿ ತೋಡುವ ಕೆಲಸ ಮಾಡುತ್ತಿದ್ದು, ಕಳೆದ 12 ದಿನಗಳ ಹಿಂದೆ ತನ್ನ ಇಬ್ಬರು ಮಕ್ಕಳು ಹಾಗೂ ಚಿಕ್ಕಪ್ಪನ ಮಗನಾದ ಮೂರ್ತಿ ಅವರ ಕುಟುಂಬದೊಂದಿಗೆ ರಾಯರದೊಡ್ಡಿ ಬಳಿಯ ಮಾದೇವಪ್ಪ ಎಂಬುವರ ಜಮೀನಿನಲ್ಲಿ ಭಾನುವಾರ ಬಾವಿ ತೋಡುವ ಕೆಲಸದಲ್ಲಿ ತಲ್ಲೀನರಾಗಿದ್ದರು. ಈ ವೇಳೆ ಜತೆಯಲ್ಲೇ ಉಳಿದುಕೊಂಡಿದ್ದ ವೆಟ್ರಿವೇಲ್ ಅಪ್ರಾಪ್ತೆಯನ್ನು ಹಳ್ಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.
ಸುದ್ದಿ ತಿಳಿದ ಅಪ್ರಾಪ್ತೆಯ ತಂದೆ ಸ್ಥಳಕ್ಕೆ ಧಾವಿಸಿದಾಗ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಅಪ್ರಾಪ್ತೆಯನ್ನು ಸಮಾಧಾನ ಪಡಿಸಿ ಜಮೀನಿನಲ್ಲಿನ ಟೆಂಟ್‌ಗೆ ಕರೆತರಲಾಯಿತು. ಬಾಲಕಿ ಹೊಟ್ಟೆನೋವು ತಾಳಲಾರದ ಹಿನ್ನೆಲೆಯಲ್ಲಿ ಸೋಮವಾರ ಆಕೆಯನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಈ ಬಗ್ಗೆ ಅಪ್ರಾಪ್ತೆಯ ತಂದೆ ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.