ನಮ್ಮ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ, ಆಸ್ಪತ್ರೆಗೆ ದಾಖಲು.
ವಿಜಯನಗರ ಮೆಟ್ರೋ ನಿಲ್ದಾಣದ ಬಳಿ ಘಟನೆ.
ವ್ಯಕ್ತಿ ಮೆಟ್ರೋ ಹಳಿಗೆ ಹಾರುತ್ತಿದ್ದಂತೆ ವಿದ್ಯುತ್ ಕಡಿತಗೊಳಿಸಿದ ಭದ್ರತಾ ಸಿಬ್ಬಂದಿ.
ಬೆಂಗಳೂರು: ವಿಜಯನಗರ ಮೆಟ್ರೋ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಇದರಿಂದ ರೈಲು ಸಂಚಾರದಲ್ಲಿ ವ್ಯತ್ಯಯವುಂಟಾಗಿ, ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದರು.
ರೈಲು ಬರುತ್ತಿದ್ದಂತೆ ಹಳಿಗೆ ಹಾರಲು ಹೋಗುತ್ತಿದ್ದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ತಡೆದು, ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ರಕ್ಷಿಸಿದ್ದಾರೆ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿಯನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮಾಹಿತಿ ಹಂಚಿಕೊಳ್ಳಲಾಗಿದೆ.
ಮಂಗಳವಾರ ಮಧ್ಯಾಹ್ನ ಸುಮಾರು 1.40ರ ಸುಮಾರಿಗೆ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ರೈಲು ಹಳಿಗಳ ಮೇಲೆ ಹಾರಲು ಯತ್ನಿಸಿದ್ದಾರೆ. ತಕ್ಷಣವೇ ನಿಲ್ದಾಣದ ಅಧಿಕಾರಿಗಳು ತುರ್ತು ಕ್ರಮಗಳನ್ನು ಕೈಗೊಂಡು, ಸಂಬಂಧಪಟ್ಟ ವ್ಯಕ್ತಿಯನ್ನು ರಕ್ಷಿಸಿ ವೈದ್ಯಕೀಯ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.ಘಟನೆ ಬಳಿಕ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯ ಉಂಟಾಗಿತ್ತು. ನೂರಾರು ಪ್ರಯಾಣಿಕರು ರೈಲು ಸಂಚಾರ ವಿಳಂಬದಿಂದಾಗಿ ಗಂಟೆ ಗಟ್ಟಲೇ ನಿಲ್ದಾಣದಲ್ಲಿಯೇ ಕಾಯುವ ಪರಿಸ್ಥಿತಿ ಎದುರಾಗಿತ್ತು.
ಸದ್ಯ ರಕ್ಷಣಾ ಕಾರ್ಯಾಚರಣೆ ಪೂರ್ಣವಾಗಿದ್ದು, ಮಧ್ಯಾಹ್ನದಿಂದಲೇ ನೇರಳೆ ಮಾರ್ಗದ ಎಲ್ಲ ರೈಲು ಸಂಚಾರವು ಯಥಾಸ್ಥಿಗೆ ಬಂದಿದೆ. ಇನ್ನು ಹಸಿರು ಮತ್ತು ಹಳದಿ ಮಾರ್ಗದಲ್ಲಿ ಯಾವುದೇ ಸಂಚಾರ ವ್ಯತ್ಯಯ ಕಾಣಿಸಿಕೊಂಡಿಲ್ಲ. ಪ್ರಯಾಣಿಕರು ಈಗ ಆರಾಮದಾಯಕವಾಗಿ ನಿಮ್ಮ ಗಮ್ಯ ಸ್ಥಾನವನ್ನು ತಲುಪಬಹುದು ಎಂದು ಹೇಳಲಾಗಿದೆ.
ನೇರಳೆ ಮಾರ್ಗ ಮಧ್ಯಾಹ್ನ 1:41ರ ಸುಮಾರಿಗೆ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂಭಾಗದ ಹಳಿಗೆ ವ್ಯಕ್ತಿಯೊಬ್ಬರು ಇಳಿದಿದ್ದಾರೆ. ಇದರಿಂದ ನೇರಳೆ ಮಾರ್ಗದಲ್ಲಿ ರೈಲು ಸೇವೆಗಳಲ್ಲಿ ವಿಳಂಬವಾಗುವ ನಿರೀಕ್ಷೆಯಿದೆ. ಹೆಚ್ಚಿನ ವಿವರಗಳನ್ನು ತಿಳಿಸಲಾಗುವುದು. ಪ್ರಯಾಣಿಕರಿಗೆ ಉಂಟಾಗಿರುವ ಅನಾನುಕೂಲಕ್ಕಾಗಿ ವಿಷಾದಿಸುತ್ತೇವೆ ಎಂದು ಎಕ್ಸ್ನಲ್ಲಿ ಬಿಎಂಆರ್ಸಿಎಲ್ ಮಾಹಿತಿ ಹಂಚಿಕೊಂಡಿತ್ತು.